₹1 ಕೋಟಿ ವೆಚ್ಚದಲ್ಲಿ ಶಾಲೆ ಅಭಿವೃದ್ಧಿಪಡಿಸಿದ ಹಳೆ ವಿದ್ಯಾರ್ಥಿಗಳು!

KannadaprabhaNewsNetwork | Published : Nov 21, 2023 12:45 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬ್ಯಾಡಗಿಶಿಥಿಲಾವಸ್ಥೆಯಲ್ಲಿದ್ದ ತಾವು ಓದಿದ ಪ್ರಾಥಮಿಕ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳು ಸೇರಿ ₹1 ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ನಡೆದಿದೆ.ಊರಿನ ಜನರು ಸೇರಿ ದೇವಸ್ಥಾನ, ಮಠಮಂದಿರಗಳನ್ನು ಕಟ್ಟಿದ ಉದಾಹರಣೆಗಳಿವೆ. ಆದರೆ ಇಲ್ಲಿ ಶಾಲೆಯನ್ನು ನಿರ್ಮಿಸುವಂತಹ ಸಂಕಲ್ಪವನ್ನು ಹಳೆಯ ವಿದ್ಯಾರ್ಥಿಗಳು ಮಾಡಿರುವುದು ಬೇರೆ ಊರಿನವರಿಗೆ ಮಾದರಿಯಾಗಿದೆ.

ಶಿವಾನಂದ ಮಲ್ಲನಗೌಡರ

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಶಿಥಿಲಾವಸ್ಥೆಯಲ್ಲಿದ್ದ ತಾವು ಓದಿದ ಪ್ರಾಥಮಿಕ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳು ಸೇರಿ ₹1 ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ನಡೆದಿದೆ.

ಊರಿನ ಜನರು ಸೇರಿ ದೇವಸ್ಥಾನ, ಮಠಮಂದಿರಗಳನ್ನು ಕಟ್ಟಿದ ಉದಾಹರಣೆಗಳಿವೆ. ಆದರೆ ಇಲ್ಲಿ ಶಾಲೆಯನ್ನು ನಿರ್ಮಿಸುವಂತಹ ಸಂಕಲ್ಪವನ್ನು ಹಳೆಯ ವಿದ್ಯಾರ್ಥಿಗಳು ಮಾಡಿರುವುದು ಬೇರೆ ಊರಿನವರಿಗೆ ಮಾದರಿಯಾಗಿದೆ.

ಶತಮಾನದ ಶಾಲೆ:

ಶತಮಾನದ ಇತಿಹಾಸ ಹೊಂದಿದ್ದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಬಹುತೇಕ ಕೊಠಡಿಗಳು ಶಿಥಿಲಗೊಂಡಿದ್ದು, ಅಲ್ಲಿನ ವಿದ್ಯಾರ್ಥಿಗಳು ಹೊರಗೆ ಕುಳಿತು ಕಲಿಯಬೇಕಾದ ಸ್ಥಿತಿ ಇತ್ತು. ಇದನ್ನು ಕಂಡ ಹಳೆ ವಿದ್ಯಾರ್ಥಿಗಳು ಸುಮ್ಮನೆ ಕುಳಿತುಕೊಳ್ಳದೆ ನೂತನ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಕದ ತಟ್ಟಿದರು. ಆದರೆ ಸರ್ಕಾರಗಳು ಅದಲು ಬದಲಾದರೂ ಬಿಡಿಗಾಸು ಅನುದಾನವೂ ಬಿಡುಗಡೆಯಾಗಲಿಲ್ಲ.

ಕಳೆದ 2018ರ ರಾಜ್ಯ ವಿದಾನಸಭೆ ಚುನಾವಣೆ ಸಂದರ್ಭ ಮತದಾನ ಜಾಗೃತಿಗೆಂದು ವಿದ್ಯಾರ್ಥಿಗಳೊಂದಿಗೆ ಗ್ರಾಮದಲ್ಲಿ ಜಾಥಾ ನಡೆಸಲು ತೆರಳಿದಾಗ ಸದರಿ ಶಾಲೆಯ 2 ಕೊಠಡಿಗಳು ಕುಸಿದು ಬಿದ್ದಿದ್ದವು. ಅದೃಷ್ಟವಶಾತ್‌ ಆಗ ಅಲ್ಲಿ ವಿದ್ಯಾರ್ಥಿಗಳು ಇರಲಿಲ್ಲ. ಈ ಘಟನೆ ಹಳೆ ವಿದ್ಯಾರ್ಥಿಗಳ ಕಣ್ಣು ತೆರೆಸಿತು. ಸರ್ಕಾರದ ಅನುದಾನಕ್ಕೆ ಎದುರು ನೋಡದೇ ಸ್ವಂತ ಹಣದಲ್ಲಿ ಶಾಲೆಯ ಮರು ನಿರ್ಮಾಣಕ್ಕೆ ಮುಂದಾದರು.

500 ಹಳೆ ವಿದ್ಯಾರ್ಥಿಗಳ ಪಡೆ:

ಇದೇ ಶಾಲೆಯಲ್ಲಿಯೇ ಶಿಕ್ಷಣ ಪಡೆದ ಊರಿನವರು ವೈದ್ಯರು, ಶಿಕ್ಷಕರು, ವಕೀಲರು, ಆರ್‌ಟಿಒ ಸೇರಿದಂತೆ ಸರ್ಕಾರಿ ಸೇವೆಯಲ್ಲಿದ್ದವರು. ವ್ಯಾಪಾರಸ್ಥರು, ರೈತರೂ ಆಗಿದ್ದರು. ಸುಮಾರು 500 ಜನ ವಿದ್ಯಾರ್ಥಿಗಳ ದಂಡೇ ಕಟ್ಟಡ ನಿರ್ಮಾಣಕ್ಕೆಂದು ಪಣತೊಟ್ಟಿತು.

8 ಕೊಠಡಿಗಳ 2 ಅಂತಸ್ತಿನ ಕಟ್ಟಡ:

8 ಕೊಠಡಿಗಳ ಎರಡು ಅಂತಸ್ತಿನ ಭವ್ಯವಾದ ಕಟ್ಟಡ ನಿರ್ಮಾಣಗೊಂಡಿದ್ದು, ಸರ್ಕಾರಕ್ಕೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ. 4 ವರ್ಷದಲ್ಲಿ ಸಿದ್ಧವಾದ ಈ ಶಾಲೆಯ ಕಟ್ಟಡ ನ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು, ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು, ಶಾಸಕ ಬಸವರಾಜ ಶಿವಣ್ಣನವರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕದರಮಂಡಲಗಿ ಗ್ರಾಮದ ಯುವಕರು ತಾವು ಸಂಪಾದಿಸಿದ ಹಣದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಡುವ ಮೂಲಕ ನಮ್ಮ ಮೇಲಿದ್ದ ಭಾರವನ್ನು ಕಡಿಮೆಗೊಳಿಸಿದ್ದಾರೆ. ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಸಾಧ್ಯವೆಂಬುದಕ್ಕೆ ಇದೊಂದು ಉತ್ತಮ ನಿದರ್ಶನ ಎನ್ನುತ್ತಾರೆ ಶಾಸಕ ಬಸವರಾಜ ಶಿವಣ್ಣನವರ

ಶಿಥಿಲಾವಸ್ಥೆಗೆ ತಲುಪಿದ್ದ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳು ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಿರುವುದು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ.

Share this article