ಧಾರವಾಡ:
ಪುಸ್ತಕ ಲೋಕಾರ್ಪಣೆಗೊಳಿಸಿದ ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತೊರೆದು ಕನ್ನಡ ಅಸ್ಮಿತೆಗಾಗಿ ಹೋರಾಡಿದ ಪ್ರಮುಖ ವ್ಯಕ್ತಿಗಳಲ್ಲಿ ಆಲೂರು ವೆಂಕಟರಾವ್ ಅವರು ಅಗ್ರಗಣ್ಯರು. ವಕೀಲ ವೃತ್ತಿ ಬದಿಗೊತ್ತಿ ಕನ್ನಡ ಭಾಷೆಯ ಉಳಿವಿಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು. ಇಂತಹ ಮಹನೀಯರ ವ್ಯಕಿತ್ವವನ್ನು ಯುವಪೀಳಿಗೆ ತಿಳಿದುಕೊಳ್ಳುವುದು ಅತ್ಯಗತ್ಯ ಎಂದರು.
ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆ ಪುಸ್ತಕಗಳ ಬಿಡುಗಡೆ ಮಾಡಿ ಅಗಾಧವಾದ ಹೋರಾಟದ ಹಾದಿಯನ್ನು ಸಂಕ್ಷಿಪ್ತಗೊಳಿಸಿ ಸರಳವಾಗಿ ಎಲ್ಲರೂ ಓದಿ ಅದರ ಮೂಲವನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಆಸಕ್ತಿ ವಹಿಸಬೇಕೆಂದು ಪಟ್ಟಣಶೆಟ್ಟಿ ತಿಳಿಸಿದರು.ವಿಶೇಷ ಉಪನ್ಯಾಸ ನೀಡಿದ ಶಿವಪುತ್ರಪ್ಪ ಆರ್. ಆಶಿ, ಕನ್ನಡ ನಾಡಿನ ಉಳಿವಿಗಾಗಿ ಹೋರಾಡಿದ ಚೇತನರ ಪೈಕಿ ಎರಡು ಗಣ್ಯರ ಪುಸ್ತಕ ಮಾಲಿಕೆ ಪರಿಚಯಿಸಿ ಅದರ ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯಾವರ್ಧಕ ಸಂಘ, ಸಾಹಿತ್ಯ ಪರಿಷತ್ ಸ್ಥಾಪಿಸಿ ಕನ್ನಡ ಭಾಷಿಕರನ್ನು ಒಟ್ಟುಗೂಡಿಸಲು, ಭಾಷಾವಾರು ಪ್ರಾಂತ್ಯ ರಚನೆ ಮಾಡಲು ಅನೇಕ ಮಹನೀಯರು ಒಟ್ಟಾಗಿ ಕೆಲಸ ಮಾಡಿದ್ದರು. ಅಂತಹ ಸಂಸ್ಥೆಗಳ ಮುಂದಾಳತ್ವ ವಹಿಸಿ, ಮುಂಚೂಣಿ ನಾಯಕರಲ್ಲಿ ಆಲೂರು ವೆಂಕಟರಾವ್, ಡೆಪ್ಯೂಟಿ ಚನ್ನಬಸಪ್ಪನವರು, ಮುದವೀಡು ಕೃಷ್ಣರಾಯರು, ಬಿಂದೂರಾವ್ ಮುತಾಲಿಕ್ ದೇಸಾಯಿ, ಕಡಪಾ ರಾಘವೇಂದ್ರ ರಾವ್ ಹಾಗೂ ಬಳ್ಳಾರಿ ಸಿದ್ದಮ್ಮ, ಜಯದೇವಿತಾಯಿ ಲಿಗಾಡೆ ಇನ್ನೂ ಮುಂತಾದ ಮಹಿಳೆಯರು ಕನ್ನಡ ನಾಡು ಕಟ್ಟಿದ ಮಹನೀಯರಲ್ಲಿ ಪ್ರಮುಖರಾದವರು ಎಂದು ಹೇಳಿದರು.
ಟ್ರಸ್ಟ್ ಸದಸ್ಯರಾದ ಸಿ.ಯು. ಬೆಳ್ಳಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ಪಾಟೀಲ ಮತ್ತು ಕಲ್ಪತರು ಮಹಿಳಾ ಸಂಘದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಟ್ರಸ್ಟ್ ಸದಸ್ಯರಾದ ದ್ರೌಪದಿ ವಿಜಾಪೂರ ವಂದಿಸಿದರು. ವಿಶ್ವನಾಥ ಕುಲಕರ್ಣಿ, ಗೀತಾ ಆಲೂರ ಇದ್ದರು.