ಬೆಳೆ ವಿಮೆ ನೋಂದಣಿಯಲ್ಲಿನ ಗೊಂದಲಗಳನ್ನು ತಕ್ಷಣ ಸರಿಪಡಿಸಿ, ಹಳೆಯ ಪದ್ಧತಿಯಂತೆ ವಿಮೆ ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಹಾವೇರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ ನೀಡಬೇಕು ಎಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.

ಹಾವೇರಿ: ಬೆಳೆ ವಿಮೆ ನೋಂದಣಿಯಲ್ಲಿನ ಗೊಂದಲಗಳನ್ನು ತಕ್ಷಣ ಸರಿಪಡಿಸಿ, ಹಳೆಯ ಪದ್ಧತಿಯಂತೆ ವಿಮೆ ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಹಾವೇರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ ನೀಡಬೇಕು ಎಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.

ನಗರದ ಪರಿವೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ಜಿಲ್ಲಾ ರೈತ ಸಂಘದ ಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಬೆಳೆ ವಿಮೆ ಪಾವತಿಗೆ ಜು.30ರ ವರೆಗೆ ಅವಕಾಶವಿದ್ದರೂ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತರು ಸಾಲವಿಲ್ಲವೆಂಬ ದೃಢೀಕರಣ ಪತ್ರಕ್ಕೆ ಸಹಿ ಹಾಕಬೇಕೆಂಬ ಷರತ್ತು ಗೊಂದಲಕ್ಕೆ ಕಾರಣವಾಗಿದೆ. ಸಾಲ ಪಡೆದಿರುವುದು ಪರಿಶೀಲನೆ ವೇಳೆ ಕಂಡುಬಂದರೆ ವಿಮೆ ಅರ್ಜಿ ತಿರಸ್ಕರಿಸುವ ಹಾಗೂ ಮಂಜೂರಾದ ವಿಮೆ ಹಣ ಮುಟ್ಟುಗೋಲು ಹಾಕಿಕೊಳ್ಳುವ ಷರತ್ತು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಮುಖಂಡರು ದೂರಿದರು.

ಈ ಕುರಿತು ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರಿಗೆ ಹಕ್ಕೊತ್ತಾಯ ಸಲ್ಲಿಸಲಾಗಿದೆ. ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೂ ಸಮಸ್ಯೆ ತರಲಾಗಿದೆ. ಆದರೂ ಪರಿಹಾರ ದೊರೆತಿಲ್ಲ. ವಿಮೆ ನೋಂದಣಿಗೆ ಕೆಲವೇ ದಿನಗಳು ಉಳಿದಿದ್ದು, ಸರ್ಕಾರ ತಕ್ಷಣ ಷರತ್ತುಗಳನ್ನು ವಾಪಸ್ ಪಡೆದು ಬ್ಯಾಂಕ್, ಸಹಕಾರಿ ಸಂಘ, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿಮೆ ನೋಂದಣಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಜುಲೈ ಮೊದಲ ವಾರದ ವೇಳೆಗೆ ಶೇ. 50ರಷ್ಟು ಮಳೆ ಕೊರತೆಯಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲ, ಅಂತರ್ಜಲ ಕುಸಿದಿದೆ. ತೇವಾಂಶ ಕೊರತೆಯಿಂದ ಬಿತ್ತಿದ ಬೆಳೆ ಮೊಳಕೆಯೊಡೆಯದೆ, ಹುಟ್ಟಿದ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ. ಸಾಲ ಮಾಡಿ ಬಂಡವಾಳ ಹೂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ ಕೃಷಿ ಸಾಲ ಮನ್ನಾ ಮಾಡಬೇಕು, ಮರು ಸಾಲ ನೀಡಬೇಕು, ಶುಂಠಿ, ಅಡಕೆ, ಮೆಣಸಿನಕಾಯಿ, ಮಾವು ಬೆಳೆಗಳ ಬಾಕಿ ವಿಮೆ ಪರಿಹಾರ ಹಾಗೂ ಸವಣೂರು ತಾಲೂಕಿನ 2025-26ನೇ ಸಾಲಿನ ಮುಂಗಾರು ಬೆಳೆ ವಿಮೆ ಹಣ ಜಮಾ ಮಾಡಬೇಕು. ಅಸಮರ್ಪಕ ವಿದ್ಯುತ್ ಪೂರೈಕೆ ಸರಿಪಡಿಸಿ ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೊಳಿಸಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜು. 21ರಂದು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಎಚ್.ಎಚ್. ಮುಲ್ಲಾ, ಮಾಲತೇಶ ಪೂಜಾರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಶಂಕ್ರಣ್ಣ ಶಿರಗಂಬಿ, ಮರಿಗೌಡ ಪಾಟೀಲ, ಗಂಗಾಧರ ಎಲಿ, ಬಸನಗೌಡ ಗಂಗಪ್ಪನವ, ಗುಡ್ಡನಗೌಡ ಪ್ಯಾಟಿಗೌಡ್ರ, ದಿಳ್ಳೆಪ್ಪ ಮಣ್ಣೂರ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಜಾನ್ ಪುನೀತ್, ಸುರೇಶ ಚಲವಾದಿ ಇತರರು ಇದ್ದರು.