)
ಮೂಡುಬಿದಿರೆ: ಪದವಿ ಬದುಕಿನಲ್ಲಿ ಆರಂಭಿಕ ಅವಕಾಶವನ್ನು ಒದಗಿಸಿದರೆ, ಶ್ರೇಷ್ಟತೆಯ ಶಿಖರ ತಲುಪುವುದು ನಮ್ಮ ನಿಲುವು ಹಾಗೂ ಚಿಂತನೆಯಿಂದ ಎಂದು ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹೇಳಿದರು.ಸೋಮವಾರ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾರ್ಷಿಕ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಾಮಾಣಿಕತೆ ಮತ್ತು ಶಿಸ್ತು ಒಂದಕ್ಕೊಂದು ಪೂರಕ. ಪ್ರಾಮಾಣಿಕತೆ ವ್ಯಕ್ತಿತ್ವಕ್ಕೆ ನೈತಿಕ ಬಲ ನೀಡಿದರೆ, ಶಿಸ್ತು ಜೀವನಕ್ಕೆ ವೈಯಕ್ತಿಕ ಬಲ ನೀಡುತ್ತದೆ. ಈ ಎರಡು ಗುಣಗಳು ಬೆರೆತಾಗ ವ್ಯಕ್ತಿ ಯಶಸ್ವಿಯಾಗುತ್ತಾನೆ.೩೦ ಸಾವಿರದಿಂದ ೪೫೦ ಕೋಟಿಗೆ:ಸ್ವಯಂ ನಂಬಿಕೆ, ಪರಿಶ್ರಮ ಮತ್ತು ನಿಷ್ಠೆಯ ಯಶೋಗಾಥೆ ತನ್ನ ಬದುಕಿನ ಕಥೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ, ಆರಂಭದ ದಿನಗಳಲ್ಲಿ ದೊಡ್ಡ ಕನಸು ಇದ್ದರೂ, ಅದಕ್ಕೆ ಬಲ ನೀಡುವಷ್ಟು ಸಂಪನ್ಮೂಲ ನನ್ನ ಬಳಿ ಇರಲಿಲ್ಲ. ಆದರೆ ಪರಿಶ್ರಮ, ದೃಢನಿಷ್ಠೆ ಮತ್ತು ಆತ್ಮವಿಶ್ವಾಸ ಯಶಸ್ವಿ ಉದ್ಯಮಿಯನ್ನಾಗಿಸಿತು. ಕೇವಲ ೩೦,೦೦೦ ರು.ನಿಂದ ಆರಂಭಿಸಿದ ಉದ್ಯಮ ಇಂದು ವಾರ್ಷಿಕ ೪೫೦ ಕೋಟಿಯ ವ್ಯವಹಾರ ನಡೆಸುವ ಹಂತಕ್ಕೆ ತಲುಪಿದೆ, ೧೪೦೦ಕ್ಕೂ ಹೆಚ್ಚು ನೌಕರರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದರು. ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಮಾತನಾಡಿ, ಸ್ವಯಂ ನಂಬಿಕೆ, ಸ್ಪಷ್ಟ ಗುರಿ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಮನೋವೃತ್ತಿ ವ್ಯಕ್ತಿಯನ್ನು ಶ್ರೇಷ್ಟನನ್ನಾಗಿಸುತ್ತದೆ ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕಾತ್, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಜಾನ್ಸಿ ಪಿ.ಎನ್., ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎ.ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಯೋಜಕರು, ಸದಸ್ಯರು, ಆಳ್ವಾಸ್ ಪದವಿ ಪೂರ್ವ ಕಾಲೇಜು ಸಿಬ್ಬಂದಿ ಇದ್ದರು. ಉಪನ್ಯಾಸಕಿ ರಶ್ಮಿನ್ ತನ್ವಿರ್ ನಿರೂಪಿಸಿ, ಪೂರ್ಣಿಮಾ ಸ್ವಾಗತಿಸಿದರು.