ಪಾಲಿಕೆ ಬಜೆಟ್‌ ಪೂರ್ವಭಾವಿ ಸಭೆಗೆ ಬೆರಳೆಣಿಕೆ ಹಾಜರು: ಡಿಸಿ ನಿರಾಸೆ

KannadaprabhaNewsNetwork |  
Published : Dec 31, 2025, 03:00 AM IST
ದ.ಕ. ಜಿಲ್ಲಾಧಿಕಾರಿ ದರ್ಶನ್‌  | Kannada Prabha

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆ ಬಜೆಟ್‌ ತಯಾರಿಕೆ ಸಾರ್ವಜನಿಕ ಸಭೆ ಸೋಮವಾರ ನಡೆಯಿತು. ಬೆರಳೆಣಿಕೆಯ ಸಾರ್ವಜನಿಕರ ಭಾಗವಹಿಸುವಿಕೆಗೆ ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದರ್ಶನ್‌ ನಿರಾಸೆ ವ್ಯಕ್ತಪಡಿಸಿದರು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 2026-27ನೇ ಸಾಲಿನ ಬಜೆಟ್‌ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಥಮ ಸುತ್ತಿನ ಸಾರ್ವಜನಿಕ ಸಭೆ ಸೋಮವಾರ ನಡೆಯಿತು. ಆದರೆ ಸಭೆಯಲ್ಲಿ ಬೆರಳೆಣಿಕೆಯ ಸಾರ್ವಜನಿಕರ ಭಾಗವಹಿಸುವಿಕೆಗೆ ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದರ್ಶನ್‌ ನಿರಾಸೆ ವ್ಯಕ್ತಪಡಿಸಿದರು.

ಸಭೆಗೆ ನೋಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೋಂದಾಯಿತ ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಭೆಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳ ಕೆಲ ಪ್ರತಿನಿಧಿಗಳು, ಸಾರ್ವಜನಿಕರು ಸೇರಿ ಕೇವಲ 12 ಮಂದಿ ಮಾತ್ರ ಭಾಗವಹಿಸಿದ್ದರು. ನಿಕಟಪೂರ್ವ ಜನಪ್ರತಿನಿಧಿಗಳ ಕೊರತೆಯೂ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ದರ್ಶನ್‌ ಮಾತನಾಡಿ, ಸಲಹೆಗಳನ್ನು ನೀಡಲು ಭಾಗವಹಿಸಿದವರ ಸಂಖ್ಯೆ ಕಡಿಮೆಯಾಗಿದೆ. 2ನೇ ಸುತ್ತಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪಾಲಿಕೆಯ ಬಜೆಟ್‌ಗೆ ಸಂಬಂಧಿಸಿ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.

ಕೆರೆ, ಪಾರ್ಕ್‌ಗಳ ನಿರ್ವಹಣೆ ಇಲ್ಲ:

ನಗರದ ಹಲವು ಕಡೆ ಪಾರ್ಕ್, ಕೆರೆಗಳು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಗೊಂಡರೂ ನಿರ್ವಹಣೆ ಆಗದೆ ಜನರ ತೆರಿಗೆಯ ಕೋಟ್ಯಂತರ ರು. ಮೊತ್ತ ಪೋಲಾಗುತ್ತಿದೆ ಎಂದು ಸಾರ್ವಜನಿಕರ ಪರವಾಗಿ ಜಿ.ಕೆ. ಭಟ್‌ ಅಸಮಾಧಾನ ವ್ಯಕ್ತಪಡಿಸಿದರು.

ಮುಡಾ ಹಾಗೂ ಸ್ಮಾರ್ಚ್‌ ಸಿಟಿಯಿಂದ ಅಭಿವೃದ್ಧಿ ಆದ ಕಾಮಗಾರಿಗಳ ನಿರ್ವಹಣೆ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ನಗರದ ವಿವಿಧ ಕಡೆಯ 28 ಕೆರೆಗಳು, 16 ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ. ಅವುಗಳನ್ನು ಪಾಲಿಕೆಗೆ ಹಸ್ತಾಂತರ ಮಾಡುವ ಸಂದರ್ಭ ನಿರ್ವಹಣೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ಕೈಗೆತ್ತಿಗೊಳ್ಳುವ ಸಂದರ್ಭದಲ್ಲೇ ಟೆಂಡರ್‌ ವಹಿಸುವವರಿಗೆ ಮೂರರಿಂದ ಐದು ವರ್ಷಗಳ ನಿರ್ವಹಣೆಗೆ ಷರತ್ತು ವಿಧಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಉತ್ತರಿಸಿದರು.ಪಚ್ಚನಾಡಿಯಲ್ಲಿ ಸಂಗ್ರಹವಾಗಿರುವ ಸಾಂಪ್ರದಾಯಿಕ ಕಸ (ಹಳೆ ಕಸ) ವಿಲೇವಾರಿಗೆ ಸಂಬಂಧಿಸಿ ನಾಗರಿಕರ ಸಲಹೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್‌, ಸಾಂಪ್ರದಾಯಿಕ ಕಸವನ್ನು ಗುತ್ತಿಯಡಿ ನಿರ್ವಹಣೆ ಕಾರ್ಯ ನಡೆಯುತ್ತಿದೆ. ಸಿಬ್ಬಂದಿ ಕೊರತೆಯಿಂದ ವಿಲೇ ಕಾರ್ಯ ತಡವಾಗಿದ್ದು, ಈಗ ಮತ್ತೆ ವೇಗ ಪಡೆದಿದೆ. ಸಂಗ್ರಹವಾಗಿದ್ದ 9 ಲಕ್ಷ ಟನ್‌ ಕಸದಲ್ಲಿ 6.5 ಲಕ್ಷ ಟನ್‌ ಇನ್ನು ಕ್ಲಿಯರ್‌ ಮಾಡಬೇಕಿದ್ದು, 18 ತಿಂಗಳ ಕಾಲಾವಕಾಶವಿದೆ ಎಂದರು.ಸಭೆಯಲ್ಲಿ ಎಸ್‌.ಎಲ್‌. ಪಿಂಟೋ, ರಾಜೇಂದ್ರ ಕುಮಾರ್‌, ರಾಧಾಕೃಷ್ಣ ಸಲಹೆ ನೀಡಿದರು. ಪಾಲಿಕೆ ಕಂದಾಯ ಅಧಿಕಾರಿ ಅಕ್ಷತಾ ಇದ್ದರು.ಸುವರ್ಣ ಕರ್ನಾಟಕ ಸರ್ಕಾರೇತರ ಸಂಸ್ಥೆಯ ಎನ್‌.ಪಿ. ಶೆಣೈ ಮಾತನಾಡಿ, ಕಂದಾಯ ವಿಭಾಗದಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಕಟ್ಟಡ ಪರವಾನಿಗೆ ಪಡೆಯುವ ಸಂದರ್ಭ ನೀರು, ವಿದ್ಯುತ್‌, ಒಳಚರಂಡಿ ವ್ಯವಸ್ಥೆಗೆ ಪ್ರತ್ಯೇಕ ಪರವಾನಗಿ ಪಡೆಯಬೇಕು. ಆದರೆ ಶೇ. 50ರಷ್ಟು ಮಂದಿ ಈ ಪರವಾನಗಿ ಪಡೆಯುವುದಿಲ್ಲ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ಪಾಲಿಕೆಯಿಂದಾಗುತ್ತಿರುವ ತೆರಿಗೆ ಸೋರಿಕೆಯ ಜತೆಗೆ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಮೂಲಕ ಬಜೆಟ್‌ ಪೂರ್ವಭಾವಿ ಸಭೆ ಅಹವಾಲು ಸಭೆಯಾಗಿ ಮಾರ್ಪಟ್ಟಿತು.

ತ್ಯಾಜ್ಯ ವಿಂಗಡಣೆ ಜಾಗೃತಿ ಮೂಡಿಸಿ: ಡಿಸಿ

ಮುಂದುವರಿದ ಜಿಲ್ಲೆಗಳಲ್ಲಿ ಒಂದಾದ ದ.ಕ. ಜಿಲ್ಲೆಯಲ್ಲೇ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ಅಳವಡಿಸುವ ಪ್ರಮೇಯ ಬಂದಿರುವುದು ನಾಚಿಕೆಗೇಡಿನ ವಿಚಾರ. ಜನರು ಅವರಾಗಿಯೇ ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆ ವಾಹನಗಳಿಗೆ ಒದಗಿಸಬೇಕು. ಆದರೆ ಹಾಗೆ ಮಾಡದ ಕಾರಣ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಸ ಸಂಗ್ರಾಹಕರು ಕೆಲವು ಮನೆಗಳ ಎದುರಲ್ಲೇ ಕಸವನ್ನು ಸುರಿದು ಬೇರ್ಪಡಿಸಿಕೊಂಡು ಹೋಗುತ್ತಾರೆ. ಇದಕ್ಕಾಗಿ ಕೆಲವರು ಎಲ್ಲೆಂದರಲ್ಲಿ ಕಸವನ್ನು ಸುರಿಯುತ್ತಾರೆ. ಈ ಬಗ್ಗೆ ಜನರಲ್ಲಿಯೇ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ