ಮೂಡುಬಿದಿರೆ: ಎನ್‌ಸಿಸಿ ಯುವಜನತೆಯನ್ನು ಶಿಸ್ತು, ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮದೊಂದಿಗೆ ರೂಪಿಸುವ ಮಹತ್ವದ ಸಂಘಟನೆಯಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ತಂಡಸ್ಫೂರ್ತಿ ಬೆಳೆಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬೆಂಗಳೂರು ವಲಯದ ಸೇನಾ ನೇಮಕಾತಿ ಎಡಿಜಿ ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ.ಆಳ್ವಾಸ್ ಕಾಲೇಜು ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿಯ ಸೇನಾ, ನೌಕಾ ಹಾಗೂ ವಾಯುಪಡೆ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮೂರು ಬಾರಿ ವಿರಾಸತ್ ವೀಕ್ಷಿಸಿದ್ದ ಕ್ಯಾ ಪ್ರಾಂಜಲ್ರಜೌರಿ ಎನ್‌ಕೌಂಟರ್‌ನಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ತಂದೆ ವೆಂಕಟೇಶ್ ಎಂ. ಮಾತನಾಡಿ, ತಮ್ಮ ಮಗನ ವೀರ ಮರಣದ ನಂತರ ಆಳ್ವಾಸ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ‘ವಿರಾಸತ್’ನ್ನು ಕ್ಯಾಪ್ಟನ್ ಪ್ರಾಂಜಲ್‌ರವರಿಗೆ ಸಮರ್ಪಿಸಿದ್ದನ್ನು ಸ್ಮರಿಸಿದರು. ಪ್ರಾಂಜಲ್ ವಿರಾಸತ್ ಕಾರ್ಯಕ್ರಮವನ್ನು ಮೂರು ಬಾರಿ ಆಸಕ್ತಿಯಿಂದ ವೀಕ್ಷಿಸಿದ್ದನ್ನು ಅವರು ನೆನಪಿಸಿಕೊಂಡರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಭಾರತದಲ್ಲಿ ಅಪಾರ ಯುವಶಕ್ತಿ ಇದ್ದು, ಯುವಜನತೆ ರಾಷ್ಟ್ರದ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದರು. ನವದೆಹಲಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದ ಆರು ಕೆಡೆಟ್‌ಗಳು ಹಾಗೂ ಥಲ್ ಸೈನಿಕ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಓರ್ವ ಕ್ಯಾಡೆಟ್‌ನ್ನು ಸನ್ಮಾನಿಸಲಾಯಿತು. ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್ ದಂಪತಿ ಹಾಗೂ ವೆಂಕಟೇಶ್ ಎಂ.ರನ್ನೂ ಗೌರವಿಸಲಾಯಿತು.ಲೆಫ್ಟಿನೆಂಟ್ ಕರ್ನಲ್ ರೋಹಿತ್ ರಾಯ್, ಕಮಾಂಡರ್ ಲಿಬಿನ್ ಜಾನ್ಸನ್, ವಿಂಗ್ ಕಮಾಂಡರ್ ಪ್ರವೀಣ್ ಕರಿಯಪ್ಪ, ಕರ್ನಲ್ ಜಿ. ಸೋಮು ಮಹಾರಾಜನ್, ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್ ಪತ್ನಿ ಮರ್ಲಿನ್ ಫರ್ನಾಂಡಿಸ್, ಫೆಡರಲ್ ಬ್ಯಾಂಕ್‌ನ ಸಂಜೋ ಜೋಸೆಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಎಎನ್‌ಒಗಳಾದ ಕಿರಣ್, ಧನಂಜಯ ಆಚಾರ‍್ಯ, ಪ್ರಸಾದ್ ಇದ್ದರು. ಪವಿತ್ರ ನಿರೂಪಿಸಿದರು.