ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಕನ್ನಡ ನಾಡು ಏಕೀಕರಣವಾಗಲು ಸಾಕಷ್ಟು ಎಡರು-ತೊಡರುಗಳನ್ನು ಎದುರಿಸಿದೆ. ಹಲವು ಮಹನೀಯರು ನಾಡು ಏಕೀಕರಣವಾಗಲು ತಮ್ಮ ಮನ-ಧನವನ್ನು ಅರ್ಪಿಸುವ ಮೂಲಕ ಚೆಲುವ ಕನ್ನಡನಾಡನ್ನು ನಮಗೆ ಧಾರೆ ಎರೆದು ಕೊಟ್ಟಿದ್ದಾರೆ. ಇಂತಹ ಚೆಲವ ಕನ್ನಡನಾಡು, ನುಡಿಗಾಗಿ ನಾವು ಹೋರಾಟ ಮಾಡಲು ಸದಾ ಸಿದ್ದರಾಗಬೇಕಿದೆ ಎಂದು ನಿವೃತ್ತ ಶಿಕ್ಷಕ ಬಿ.ಎಸ್.ಮೇಟಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದಂಗವಾಗಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಮಾಡಿ ನಮನ ಸಲ್ಲಿಸಿ ಮಾತನಾಡಿದರು. ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡಕ್ಕೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದ್ದು, ಭಾಷಾವಾರು ರಾಜ್ಯಗಳ ವಿಂಗಡನೆಯ ಸಂದರ್ಭದಲ್ಲಿಯೂ ಸಾಕಷ್ಟು ಅನ್ಯಾಯವಾಗಿದೆ. ರಾಜ್ಯಕ್ಕೆ ಇನ್ನೂ ಅನೇಕ ಪ್ರದೇಶಗಳು ಬರಬೇಕಿತ್ತು. ಆಲೂರು ವೆಂಕಟರಾಯ, ಜಯದೇವಿ ತಾಯಿ ಲಿಗಾಡೆ, ಕಂಬಳಿ ಸಿದ್ದಪ್ಪ, ಡೆಪ್ಯೂಟಿ ಚನ್ನಬಸಪ್ಪ, ಗಂಗಾಧರ ದೇಶಪಾಂಡೆ, ಕೆ.ಸಿ.ರೆಡ್ಡಿ ಸೇರಿದಂತೆ ಅನೇಕ ಮಹನೀಯರು ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ್ದಾರೆ. ಇವರ ಶ್ರಮದ ಫಲವೇ ನಾವೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದರು.
ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಸಾಲವಾಡಗಿ ಮಾತನಾಡಿ, ಕನ್ನಡ ನಾಡಿನ ಉದಯ, ಬೆಳವಣಿಗೆ, ಮಹತ್ವ ಕುರಿತು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ವಿ.ಸೂರ್ಯವಂಶಿ ಮಾತನಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ದೈಹಿಕ ನಿರ್ದೇಶಕ ವಿ.ಎನ್.ರಜಪೂತ, ಪ್ರೊ.ಎಂ.ಕೆ.ಯಾಧವ, ಪ್ರೊ.ಪಿ.ಎಸ್.ನಾಟೀಕಾರ, ಎಂ.ಆರ್.ಮಮದಾಪುರ, ಡಾ.ಎಸ್.ಬಿ.ಜನಗೊಂಡ ಇತರರು ಇದ್ದರು. ರೇಖಾ ಕೌಲಗಿ, ಈಶ್ವರಿ ಕೋಟ್ಯಾಳ, ಅಕ್ಷತಾ ಕರಾಡೆ ಸ್ವಾಗತಿಸಿದರು. ಚಂದ್ರಶೇಖರ ರೆಡ್ಡಿ ನಿರೂಪಿಸಿದರು. ರಫಿಕ್ ಸುಲೇಮಾನ ವಂದಿಸಿದರು. ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು.