ಜಗಳೂರು ಸಮಗ್ರ ಅಭಿವೃದ್ಧಿಗೆ ಸದಾ ಬದ್ಧ: ​ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ

KannadaprabhaNewsNetwork |  
Published : Nov 07, 2026, 01:45 AM IST
06 ಜೆ.ಜಿ.ಎಲ್.1)‌ ಜಗಳೂರು ತಾಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಎನ್‌ಎಚ್‌ಎಐ (NHAI) ಅನುದಾನದಡಿ ೩.೨೮ ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿರುವ ಕಲ್ಲೇದೇವರಪುರ, ಬಸಪ್ಪನಹಟ್ಟಿ ಹಾಗೂ ಬೆಣ್ಣೆಹಳ್ಳಿ ಗ್ರಾಮಗಳ ಚರಂಡಿ ನಿರ್ಮಾಣ ಕಾಮಗಾರಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ದೀಪಬೆಳಗುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಜಗಳೂರು ತಾಲೂಕಿನ ಮೂಲಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ತಾವು ಬದ್ಧವಾಗಿದ್ದು, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಜಗಳೂರು ತಾಲೂಕಿನ ಮೂಲಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ತಾವು ಬದ್ಧವಾಗಿದ್ದು, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.

ಶುಕ್ರವಾರ ತಾಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಎನ್‌ಎಚ್‌ಎಐ ಅನುದಾನದಡಿ ೩.೨೮ ಕೋಟಿ ರು. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿರುವ ಕಲ್ಲೇದೇವರಪುರ, ಬಸಪ್ಪನಹಟ್ಟಿ ಹಾಗೂ ಬೆಣ್ಣೆಹಳ್ಳಿ ಗ್ರಾಮಗಳ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ ಒಂದೂವರೆ ವರ್ಷಗಳಿಂದ ಈ ಚರಂಡಿ ಕಾಮಗಾರಿಗಾಗಿ ನಿರಂತರ ಹೋರಾಟ ನಡೆಸಲಾಗಿತ್ತು. ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಅಷ್ಟೇ ಅಲ್ಲದೆ, ಚಿತ್ರದುರ್ಗದ ಎನ್‌ಎಚ್‌ಎಐ ಕಚೇರಿಯಲ್ಲಿ ಉಸ್ತುವಾರಿ ಸಚಿವರೊಂದಿಗೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಪರಿಣಾಮ ಇಂದು ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಚಾಲನೆ ಸಿಕ್ಕಿದೆ ಎಂದರು.

ದಾನಿಗಳ ಶೈಕ್ಷಣಿಕ ಕೊಡುಗೆಗೆ ಶ್ಲಾಘನೆ: ​ಕಲ್ಲೇದೇವರಪುರ ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ೧೨ ಕೊಠಡಿಗಳ ನಿರ್ಮಾಣಕ್ಕೆ ೧.೬೦ ಕೋಟಿ ರು. ಬೃಹತ್ ದೇಣಿಗೆ ನೀಡಿದ ಕುಂಬಳಗುಂಟೆ ಗ್ರಾಮದ ಕುಟುಂಬಕ್ಕೆ ಸಂಸದರು ಅಭಿನಂದನೆ ಸಲ್ಲಿಸಿದರು.

​ತಾಲೂಕಿನ ಭವಿಷ್ಯದ ಅಭಿವೃದ್ಧಿ ಯೋಜನೆಗಳು: ತಾಲೂಕಿನಲ್ಲಿ ಎಸ್‌ಟಿ ಸಮುದಾಯದ ಜನಸಂಖ್ಯೆ ಹೆಚ್ಚಾಗಿರುವುದರಿಂದ, ಮುಂಬರುವ ದಿನಗಳಲ್ಲಿ ತಾಲೂಕಿಗೆ ಏಕಲವ್ಯ ವಸತಿ ಶಾಲೆ ಮಂಜೂರು ಮಾಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುವುದು. ಪಲ್ಲಾಗಟ್ಟೆಯಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸಮರ್ಪಕ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

​ಕ್ಷೇತ್ರದ ಅಭಿವೃದ್ಧಿಗೆ ಅನುದಾನ: ಜಗಳೂರು ಕ್ಷೇತ್ರದಲ್ಲಿ ಒಟ್ಟು ೧೨ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲ ವರ್ಷ ೬೫ ಲಕ್ಷ ರು. ಹಾಗೂ ಎರಡನೇ ವರ್ಷ ೬೩ ಲಕ್ಷ ರು. ಸೇರಿ ಒಟ್ಟು ೧.೩೨ ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದ್ದು, ಕಲ್ಲೇದೇವರಪುರ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕಳೆದ ೮ ವರ್ಷಗಳಿಂದ ಎಸ್‌ಎಸ್‌ಕೆ ಟ್ರಸ್ಟ್ ಮೂಲಕ ಬಡ ಜನತೆಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದ್ದು, ಜಗಳೂರಿನಲ್ಲಿ ೬ ಬೃಹತ್ ಉಚಿತ ಶಿಬಿರಗಳ ಮೂಲಕ ೧,೯೦೦ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ.

​ಪಿಎಂ ರಿಲೀಫ್ ಫಂಡ್: ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಧೃಡೀಕರಣ ಪತ್ರದೊಂದಿಗೆ ಮನವಿ ಸಲ್ಲಿಸಿದರೆ, ಪ್ರಧಾನ ಮಂತ್ರಿ ಪರಿಹಾರ ನಿಧಿಯಡಿ ಚಿಕಿತ್ಸಾ ವೆಚ್ಚದ ಶೇ.೬೫ರಷ್ಟು ನೆರವನ್ನು ಕೇಂದ್ರ ಸರ್ಕಾರದಿಂದ ಕೊಡಿಸಲಾಗುವುದು. ಈವರೆಗೆ ವಿವಿಧ ರೋಗಿಗಳಿಗೆ ಸುಮಾರು ೨.೫೦ ಕೋಟಿ ರು. ಬಿಡುಗಡೆಯಾಗಿದ್ದು, ಜಗಳೂರು ತಾಲೂಕಿನ ೫೦ಕ್ಕೂ ಹೆಚ್ಚು ರೋಗಿಗಳಿಗೆ ನೆರವು ಕಲ್ಪಿಸಲಾಗಿದೆ.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ:​ ೨೦೧೮ರಲ್ಲಿ ಜಗಳೂರಿನಲ್ಲಿ ನಡೆದ ಐತಿಹಾಸಿಕ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ತಂದ ಒತ್ತಡದ ಫಲವಾಗಿ ೮ ವರ್ಷಗಳ ನಂತರ ಇಂದು ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಯುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣ ಸೂರಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಸಂತಕುಮಾರಿ, ಮಾಲಾ ಕೆ.ಪಿ ಪಾಲಯ್ಯ, ಕಲ್ಲೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಶರಣಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುರೇಶ್‌ಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ರವಿಚಂದ್ರ ಬಸವಾಪುರ, ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಶಿವನಗೌಡ, ಪ್ರಮುಖ

ಮುಖಂಡರಾದ ಬಡಯ್ಯ, ಗಿರೀಶ್ ಒಡೆಯರ್, ತಿಪ್ಪೇಸ್ವಾಮಿ, ಗೋಡೆ ಪ್ರಕಾಶ್, ಮೆದಗಿನಕೆರೆ ಈರಣ್ಣ ಗೌಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

---

ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು, ಜಮೀನುಗಳಲ್ಲಿ ಬೆಳೆ ಇಲ್ಲದೆ ಹಾಗೂ ಕುಡಿಯುವ ನೀರಿನ ಅಭಾವದಿಂದ ಜನರು ಸಂಕಷ್ಟದಲ್ಲಿದ್ದಾರೆ. ವಿಬಿಜಿರಾಮ್‌ಜಿ ಯೋಜನೆಯಡಿ ತಾಲೂಕಿಗೆ ೪೧ ಲಕ್ಷ ಮಾನವ ದಿನಗಳ ಕೆಲಸದ ಗುರಿ ಇದ್ದು, ಸದ್ಯ ೬ ಲಕ್ಷ ಮಾನವ ದಿನಗಳ ಕೆಲಸ ಮಾತ್ರ ನಿರ್ವಹಿಸಲಾಗಿದೆ. ಸರ್ಕಾರ ದಿನಕ್ಕೆ ೩೮೮ ರು. ಕೂಲಿ ನೀಡುತ್ತಿದ್ದು, ಸಂಕಷ್ಟದಲ್ಲಿರುವ ಗ್ರಾಮೀಣ ಕೂಲಿಕಾರರು ಹಾಗೂ ಸಾರ್ವಜನಿಕರು ಈ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು.

ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ