ಕನ್ನಡಪ್ರಭ ವಾರ್ತೆ ಮಂಡ್ಯ
ನಾಡಿನ ಸಾಂಸ್ಕೃತಿಕ ಜೀವಂತಿಕೆಗೆ ಕಲ್ಲು-ಶಿಲೆಗಳ ಮೇಲಿನ ಕೆತ್ತನೆಯೇ ಕಾರಣವಾಗಿದೆ. ಇದು ನಮ್ಮ ನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುತ್ತದೆ. ಇದಕ್ಕೆ ಅಮರಶಿಲ್ಪಿ ಜಕಣಾಚಾರಿಯವರ ಸಾಧನೆ, ಕೊಡುಗೆ ಅಪಾರ ಎಂದು ಜಿಲ್ಲಾಕಾರಿ ಡಾ. ಕುಮಾರ್ ಬಣ್ಣಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜ ಇವರ ಸಹಯೋಗದೊಂದಿಗೆ ಕಲಾ ಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಾಧನೆಗೆ ಸಾವಿಲ್ಲ ಎಂಬ ಮಾತಿನಂತೆ ಜಕಣಾಚಾರಿ ಕೊಟ್ಟಿರುವಂತವ ಕೊಡುಗೆ, ಸಾಧನೆಗೆ ಸಾವಿಲ್ಲ. ಅದು ಸೂರ್ಯ - ಚಂದ್ರ ಇರುವವರೆಗೂ ಜೀವಂತವಾಗಿರುತ್ತದೆ ಎಂದರು.
ಕಲೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಜಕಣಾಚಾರಿಯವರ ಇತಿಹಾಸವನ್ನು ತಿಳಿಯುವುದರ ಜೊತೆಗೆ ಮಕ್ಕಳಿಗೂ ತಿಳಿಸುವ ಕೆಲಸ ಮಾಡಬೇಕು. ಅವರ ಚಿಂತನೆ, ಆದರ್ಶ, ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.ಪುಸ್ತಕ ನೋಡಿ ಜಕಣಾಚಾರಿಯವರ ಸಾಧನೆಯನ್ನು ತಿಳಿದುಕೊಳ್ಳುವುದಕ್ಕಿಂತ ಅವರ ಸಾಧನೆ ಹಾಗೂ ಕೊಡುಗೆಗಳನ್ನು ಕಣ್ಣಾರೆ ನೋಡಿದರೆ ನಮಗೆ ಹೆಮ್ಮೆ ಉಂಟಾಗುತ್ತದೆ. ಬೇಲೂರು ಮತ್ತು ಹಳೆಬೀಡು ವಿಶ್ವಪರಂಪರೆ ಸಾಧನೆಯ ಪಟ್ಟಿಯಲ್ಲಿದೆ ಇದಕ್ಕೆ ಕಾರಣ ಶಿಲೆಗಳ ಮೇಲಿರುವ ಇತಿಹಾಸ. ಅವುಗಳನ್ನು ಒಮ್ಮೆಯಾದರೂ ನೋಡಿ ಆನಂದಿಸಬೇಕು ಎಂದು ಸಲಹೆ ನೀಡಿದರು.
ಜೀವವಿಲ್ಲದ ಕಲ್ಲಿಗೆ ಜೀವವನ್ನು ತುಂಬಿ ಕೊಡುವ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ಜಕಣಾಚಾರಿಯಂತಹ ಮಹಾನ್ ಕಲೆಗಾರರನ್ನು ಅಂತರಂಗದಲ್ಲಿ ಪೂಜಿಸಿ ಗೌರವಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಕಾರಿ ಡಾ.ಎಚ್.ಎಲ್. ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಉದಯಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹಾಗೂ ಶಿವಲಿಂಗಯ್ಯ, ವಿಶ್ವಕರ್ಮ ಸಮಾಜದ ವೇದಬ್ರಹ್ಮತಿಲಕೇಶ್ಮೂರ್ತಿ, ವಿಶ್ವಕರ್ಮ ಸಮಾಜದ ಮುಖಂಡರಾದ ವೈ.ಡಿ.ಶ್ರೀನಿವಾಸಮೂರ್ತಿ, ಎಚ್.ಪಿ ಸತೀಶ್, ನಾಗರಾಜ ಆಚಾರಿ, ಎಲ್. ಆನಂದ ಸುದರ್ಶನ್, ಎಂ.ಬಿ ರಮೇಶ್, ದೇವರಾಜು ಇನ್ನಿತರಿದ್ದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು.ಶಿಲ್ಪಕಲೆ, ವಾಸ್ತುಶಿಲ್ಪಕ್ಕೆ ಜಕಣಾಚಾರಿ ಕೊಡುಗೆ ಅಪಾರ: ಎಚ್ .ಕೆ.ಮೂರ್ತಿ
ಹಲಗೂರು: ದೇಶದ ಪ್ರಾಚೀನ ದೇವಾಲಯಗಳು ಸೇರಿದಂತೆ ವಿವಿಧ ಬಗೆಯ ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಕೌಶಲ್ಯಕ್ಕೆ ಅಮರಶಿಲ್ಪಿ ಜಕಣಾಚಾರಿಗಳ ಕೊಡುಗೆ ಅಪಾರವಾಗಿದೆ ಎಂದು ಗ್ರಾಪಂ ಸದಸ್ಯ ಎಚ್.ಕೆ.ಮೂರ್ತಿ ಅಭಿಪ್ರಾಯಪಟ್ಟರು.ಹಲಗೂರಿನ ಕಾಳಿಕಾಂಭ ಶಿವ ದೇವಾಲಯ ವಿಶ್ವಕರ್ಮ ಟ್ರಸ್ಟ್‌ನಿಂದ ಕಾಳಿಕಾಂಭ ದೇವಾಲಯದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವದಲ್ಲಿ ಮಾತನಾಡಿ, ರಾಜ್ಯದ ಬೇಲೂರು ಮತ್ತು ಹಳೇಬೀಡು ಸೇರಿದಂತೆ ವಿವಿಧೆಡೆ ಇರುವ ಪ್ರಾಚೀನ ದೇವಾಲಯಗಳಲ್ಲಿ ಖ್ಯಾತ ಶಿಲ್ಪಿ ಜಕಣಾಚಾರಿ ಅವರ ಶಿಲ್ಪಕಲೆಗಳು ಇಂದಿಗೂ ನೋಡುಗರ ಮನಸೂರೆಗೊಳ್ಳುತ್ತಿವೆ ಎಂದರು.
ನಾಡಗೀತೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ಶಿಲ್ಪಿ ಜಕಣಾಚಾರಿ ಅವರನ್ನು ಸ್ಮರಿಸಿದ್ದು, ಅವರ ಸಾಧನೆ ಎಷ್ಟು ಇತ್ತು ಎಂಬುದು ತಿಳಿಸುತ್ತದೆ ಎಂದು ಸ್ಮರಿಸಿದರು.ಈ ವೇಳೆ ಸದಸ್ಯರಾದ ಎಚ್.ಕೆ.ಮೂರ್ತಿ, ಮುಖಂಡರಾದ ಶ್ರೀನಿವಾಸಚಾರಿ, ಅನಂತಸ್ವಾಮಿ, ಗುರುವಪ್ಪಚಾರಿ, ನಂದೀಪುರ ಸಿದ್ದಪ್ಪಾಜಿ, ವಾಸುದೇವ ಸೋನಿ, ಲಿಂಗಣ್ಣಸ್ವಾಮಿ, ರಾಜೇಶ್, ಲೋಕೇಶ್, ಶಿವಲಿಂಗ, ಟೈಲರ್ ಸಿದ್ದಪ್ಪಾಜಿ ಸೇರಿದಂತೆ ಹಲವರು ಇದ್ದರು.