ಸಾಮರಸ್ಯದಿಂದ ಉತ್ತಮ ಸಮಾಜ ನಿರ್ಮಾಣ: ರಾಜೇಶ್‌ನಾಥ್‌ ಜಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಮದಲಾಪುರದ ದಿಡ್ಡಳ್ಳಿ, ಬ್ಯಾಡಗೊಟ್ಟ ಗ್ರಾಮದಲ್ಲಿ ಕುಶಾಲನಗರ ತಾಲೂಕು ವನವಾಸಿ ಕಲ್ಯಾಣ ಸಮಿತಿ ಆಯೋಜಿಸಿದ್ದ ಶ್ರೀ ಮುನೇಶ್ವರಸ್ವಾಮಿ ಮತ್ತು ಚೌಡೇಶ್ವರಿ(ಮಠದಮ್ಮ) ದೇವರ ಎರಡನೇ ವರ್ಷದ ವಾಷಿಕ ಮಹಾಪೂಜೆ ನಡೆಯಿತು. ಅಖಿಲ ಭಾರತೀಯ ಸಂತ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಶ್‌ನಾಥ್‌ ಜಿ ಸಾನ್ನಿಧ್ಯ ವಹಿಸಿದ್ದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸರ್ವ ಧರ್ಮದವರೂ ತಮ್ಮ ಧರ್ಮಗಳನ್ನೂ ನಿಷ್ಠೆಯಿಂದ ಪಾಲಿಸಿ, ಭಾರತೀಯತೆಯನ್ನು ಎತ್ತಿ ಹಿಡಿಯುವ ಮೂಲಕ ಸಾಮರಸ್ಯದಿಂದ ಬದುಕಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅರಸಿನಕುಪ್ಪೆಯ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದ ಗುರುಗಳು ಹಾಗೂ ಅಖಿಲ ಭಾರತೀಯ ಸಂತ ಸಮಿತಿಯ ಜಿಲ್ಲಾಧ್ಯಕ್ಷ ರಾಜೇಶ್‌ನಾಥ್‌ ಜಿ ಹೇಳಿದರು. ಮದಲಾಪುರದ ದಿಡ್ಡಳ್ಳಿ, ಬ್ಯಾಡಗೊಟ್ಟ ಗ್ರಾಮದಲ್ಲಿ ಕುಶಾಲನಗರ ತಾಲೂಕು ವನವಾಸಿ ಕಲ್ಯಾಣ ಸಮಿತಿ ಆಯೋಜಿಸಿದ್ದ ಶ್ರೀ ಮುನೇಶ್ವರಸ್ವಾಮಿ ಮತ್ತು ಚೌಡೇಶ್ವರಿ(ಮಠದಮ್ಮ) ದೇವರ ಎರಡನೇ ವರ್ಷದ ವಾಷಿಕ ಮಹಾಪೂಜೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸರ್ವಧರ್ಮದವರೂ ದೇಶಪ್ರೇಮವನ್ನು ಬೆಳೆಸಿಕೊಂಡು ಪರಸ್ಪರ ಸ್ನೇಹ ಸಹಕಾರದಿಂದ ಭಾರತೀಯತೆಯನ್ನು ಸಾರುವಲ್ಲಿ ಟೊಂಕ ಕಟ್ಟಿ ನಿಲ್ಲಬೇಕು. ಇದರೊಂದಿಗೆ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ತೀರಾ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಹಾಡಿಯ ಜನ ಮುಂದಾಗಬೇಕು. ತಮಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ರಾಜ್ಯ ವನವಸಿ ಕಲ್ಯಾಣ ಸಮಿತಿ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, ವಿಶ್ವಕ್ಕೆ ಬೆಳಕು ನೀಡುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ ಸಾಧ್ಯವಾಗುತ್ತದೆ. ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ಸಮಾಜಕ್ಕೆ ಎಲ್ಲವನ್ನೂ ಕೊಡುವ ಭೂಮಿ ತಾಯಿಗೆ ನಮಿಸಿ ತಮ್ಮ ನಿತ್ಯದ ಕಾಯಕಗಳನ್ನು ಮಾಡಬೇಕು ಎಂದು ಹೇಳಿದರು.

ಪ್ರಾಕೃತಿಕ ವಿಕೋಪದಂತಹ ಸಂದರ್ಭ ಎಲ್ಲವನ್ನೂ ಕಳೆದುಕೊಂಡು ಜಿಲ್ಲೆಯ ನೂರಾರು ಕುಟುಂಬಗಳು ಅಕ್ಷರಶಃ ಬೀದಿ ಪಾಲಾಗಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಹೀಗಿರುವಾಗ ಎಲ್ಲರೂ ನಿತ್ಯ ದೇವರ ಸ್ಮರಣೆಯಲ್ಲಿದ್ದರೆ ಮಾತ್ರ ಬದುಕಿನಲ್ಲಿ ಸಾರ್ಥಕ ಭಾವ ಮೂಡುತ್ತದೆ ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ವನವಾಸಿ ಕಲ್ಯಾಣ ಸಮಿತಿ ಕುಶಾಲನಗರ ತಾಲೂಕು ಸಮಿತಿ ಅಧ್ಯಕ್ಷ ಪಿ.ಸಿ.ಸಿದ್ಧ, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್‌, ಗ್ರಾಮದ ಹಿರಿಯರಾದ ಭೋಜ, ಮುತ್ತ, ಉದ್ಯಮಿ ಸುಗುರಾಜ್‌, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್‌, ಲೆಕ್ಕಪರಿಶೋಧಕ ಜತಿನ್‌, ಕಾರ್ಯಕ್ರಮ ಸಂಯೋಜಕ ಹರೀಶ್‌ ಮತ್ತಿತರರು ಉಪಸ್ಥಿತರಿದ್ದರು. ನಂತರ ಹಾಡಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೂಜಾ ಕಾರ್ಯಕ್ರಮದ ಅಂಗವಾಗಿ ಸರ್ವರಿಗೂ ಅನ್ನದಾನವನ್ನು ಏರ್ಪಡಿಸಲಾಗಿತ್ತು.

Share this article