-ಶಿವಮೊಗ್ಗದಲ್ಲಿ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಬಸವಕೇಂದ್ರದ ಡಾ. ಮರುಳಸಿದ್ದ ಸ್ವಾಮೀಜಿ ಅಭಿಮತ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪದ ಶೂನ್ಯಪೀಠದ ಮೊದಲ ಅಧ್ಯಕ್ಷ ಅಲ್ಲಮಪ್ರಭು ಕನ್ನಡ ಅನುಭಾವ ಪರಂಪರೆಯ ಅಮೇಜಾನ್ ನದಿಯಂತೆ ಎಂದು ಶಿವಮೊಗ್ಗ ಬಸವಕೇಂದ್ರದ ಡಾ. ಮರುಳಸಿದ್ದ ಸ್ವಾಮೀಜಿ ಹೇಳಿದರು.ಶರಣ ಸಾಹಿತ್ಯ ಪರಿಷತ್, ಶಿವಮೊಗ್ಗ ಬಸವಕೇಂದ್ರ ಇನ್ನಿತರ ಸಂಘಟನೆಗಳು ಶಿವಮೊಗ್ಗದ ಅಲ್ಲಮ ಬಯಲಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಅಲ್ಲಮಪ್ರಭು ಜಯಂತಿಯಲ್ಲಿ ಆಶೀರ್ವಚನ ನೀಡಿದ ಅವರು, ಜಗತ್ತಿನ ಅತಿದೊಡ್ಡ ನದಿಯಾದ ಅಮೇಜಾನ್ ನದಿಯನ್ನು ‘ಸಿಹಿನೀರಿನ ಸಮುದ್ರ’ ಎಂದು ಕರೆಯುತ್ತಾರೆ. ಅದು ಸಾಗುವ ಮಾರ್ಗದಲ್ಲಿ ಸಿಗುವ ಎಲ್ಲ ನದಿ, ತೊರೆ, ಹಳ್ಳ, ಹೊಳೆಗಳನ್ನು ತನ್ನೊಂದಿಗೆ ಕರೆದೊಯ್ದು ಸಮುದ್ರವನ್ನು ಸೇರಿಸಿಬಿಡುತ್ತದೆ ಎಂದರು.
ಪ್ರಭುವಿನ ಪ್ರಭಾವಕ್ಕೊಳಗಾಗಿ ಬಯಲಿಗೆ ಸಾಗಿದವರಲ್ಲಿ ಭಾರತೀಯ ಪರಂಪರೆಯ ಎಲ್ಲಾ ಆಧ್ಯಾತ್ಮ ಧಾರೆಗಳ ಸಾಧಕರು ಇರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಶೈವ, ವೈದಿಕ, ಜೈನ, ಬೌದ್ಧ, ಸಿದ್ಧ, ಸನ್ಯಾಸಿ, ಗೃಹಸ್ಥ. ಹೀಗೆ ಅಲ್ಲಮಪ್ರಭುವಿನ ಪ್ರಭಾವಲಯಕ್ಕೆ ಬಾರದವರೇ ಇಲ್ಲ, ಹಿರಿಯ ವಿದ್ವಾಂಸ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರ ಮಾತಿನಲ್ಲಿ ಹೇಳುವುದಾದರೆ, ‘ಬುದ್ಧನಿಗಿಂತಲೂ, ತನ್ನ ಕಾಲದ ಆಧ್ಯಾತ್ಮ ಪರಂಪರೆಯನ್ನು ಹೆಚ್ಚು ಪ್ರಭಾವಿಸಿದ್ದು ಅಲ್ಲಮಪ್ರಭುದೇವರು’ ಎಂದರು.
ಅಲ್ಲಮಪ್ರಭು ಭೂಮಿಯು ಆಕಾಶಕ್ಕೆ ಹಾರುವ ಭೂಮಿಕೆಯಾಗಬೇಕೆಂದು ಬಯಸಿದವರು. ಆದ್ದರಿಂದಲೇ ಭೂಮಿಯ ಮೇಲಣ ಯಾವುದಕ್ಕೂ ಅಂಟದೇ ಎಲ್ಲದರೊಳಗಿದ್ದು ಏನೂ ಆಗದ ಬಯಲಿನಂತೆ ಮಾನವ ಬಾಳಬೇಕೆಂದು ಪ್ರತಿಪಾದಿದರು ಎಂದು ತಿಳಿಸಿದರು.
ಸೊನ್ನೆಗೆ ಪಾರಮಾರ್ಥಿಕ ಅರ್ಥ ಕೊಟ್ಟು ಅದನ್ನುಶೂನ್ಯ ಎಂದು ಕರೆದದ್ದು ಅಲ್ಲಮಪ್ರಭು ಎಂದು ವಿವರಿಸಿದರು.
ಶಾಸಕರಾದ ಡಾ. ಧನಂಜಯ ಸರ್ಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರು, ಆಯನೂರು ಮಂಜುನಾಥ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾರುದ್ರ, ತಾಲೂಕು ಅಧ್ಯಕ್ಷ ಎಸ್.ಆರ್.ಸ್ವಾಮಿ, ಪ್ರಮುಖರಾದ ಎಚ್.ಸಿ. ಯೋಗೇಶ್, ಬೆನಕಪ್ಪ, ಚಂದ್ರಣ್ಣ, ಶಿವಯೋಗಿ, ಸುಹಾಸ್, ಕಿರಣ್ ಆನಂದಮೂರ್ತಿ, ಲವಕುಮಾರ್ ಇದ್ದರು.
ಪೋಟೋ: 31ಎಸ್‌ಎಂಜಿಕೆಪಿ03