ಅಂಬಡಬೆಟ್ಟು: ಹಳ್ಳಕ್ಕೆ ಮೋರಿ ಅಳವಡಿಸಿ ಮರು ಸಂಪರ್ಕ

KannadaprabhaNewsNetwork |  
Published : Jun 14, 2026, 03:00 AM IST
ಸಂಪರ್ಕ ಮರು ಸ್ಥಾಪನೆ | Kannada Prabha

ಸಾರಾಂಶ

ಶಾಸಕ ಹರೀಶ್ ಪೂಂಜ ಅವರು ಸಂಪರ್ಕ ಕಳೆದುಕೊಂಡಿದ್ದ ಊರಿಗೆ ತಕ್ಷಣ ಬೇಕಾದ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿನ ಮುತುವರ್ಜಿ ವಹಿಸಿ ಮಾಡಿಕೊಟ್ಟಿದ್ದಾರೆ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕ ಹಳ್ಳಕ್ಕೆ ದೊಡ್ಡ ಗಾತ್ರದ ಮೋರಿಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲು ಸಹಕರಿಸಿದ್ದಾರೆ.

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು ಸಂಪರ್ಕ ಕಳೆದುಕೊಂಡಿದ್ದ ಊರಿಗೆ ತಕ್ಷಣ ಬೇಕಾದ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿನ ಮುತುವರ್ಜಿ ವಹಿಸಿ ಮಾಡಿಕೊಟ್ಟಿದ್ದಾರೆ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕ ಹಳ್ಳಕ್ಕೆ ದೊಡ್ಡ ಗಾತ್ರದ ಮೋರಿಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲು ಸಹಕರಿಸಿದ್ದಾರೆ.

ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು ಗುರಿಪಳ್ಳ, ನಡ, ಇಂದಬೆಟ್ಟು, ಪಡ್ಪು ಮೊದಲಾದ ಪರಿಸರದ ಸಾವಿರಾರು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದವು.ಅಂಬಡಬೆಟ್ಟು ಎಂಬಲ್ಲಿ ಹರಿಯುವ ಹಳ್ಳದ ಹಳೇ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು. ಕಲ್ಮಂಜ ನಡ ಮತ್ತು ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಬಡಬೆಟ್ಟು ಹಳ್ಳದ ಸೇತುವೆ ಸಂಚಾರಕ್ಕೆ 2024ರ ಮಳೆಗಾಲದಲ್ಲಿ ಜಿಲ್ಲಾಧಿಕಾರಿ ನಿಷೇಧ ಹೇರಿದ್ದರು. ಆದರೂ ಘನವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳು ಇಲ್ಲಿ ಯಾವುದೇ ಎಗ್ಗಿಲ್ಲದೆ ಸಂಚರಿಸುತ್ತಿದ್ದವು. 2025ರ ಮಳೆಗಾಲದಲ್ಲಿ ಯಾವುದೇ ಸಂಚಾರ ನಿಷೇಧ ಹೇರಿರಲಿಲ್ಲ.ಬಹು ವರ್ಷದ ಬೇಡಿಕೆಯಾದ ಇಲ್ಲಿನ ಕಿರು ಸೇತುವೆಗೆ ಸುಮಾರು ಎರಡು ವರ್ಷದ ಹಿಂದೆ ಅನುಮೋದನೆ ದೊರಕಿ ಅನುದಾನ ಬಿಡುಗಡೆಯ ಹಂತವನ್ನು ತಲುಪಿತ್ತು. ಆದರೆ ರಾಜಕೀಯ ಮೇಲಾಟಗಳಿಂದ ಇದರ ಶಿಲಾನ್ಯಾಸಕ್ಕೆ ತೊಡಕಾಗಿತ್ತು. ಎರಡು ಪಕ್ಷಗಳೊಳಗಿನ ಮುಸುಕಿನ ಗುದ್ದಾಟದ ಕಾರಣ ಇಲ್ಲಿ ಬೇರೆ ಬೇರೆ ಪಕ್ಷಗಳ ಬ್ಯಾನರ್ ಗಳು ಅಳವಡಿಸುವುದು, ತೆರವುಗೊಳಿಸುವುದು ಆಗಾಗ ನಡೆಯುತ್ತಾ ಇತ್ತು. ಒಟ್ಟಿನಲ್ಲಿ ರಾಜಕೀಯ ಮುಸುಕಿನ ಗುದ್ದಾಟದಿಂದ ಕಿರು ಸೇತುವೆ ಕಾಮಗಾರಿ ಆರಂಭಕ್ಕೆ ವಿಳಂಬವಾಗಿ ಪ್ರಸ್ತುತ ಇಲ್ಲಿನ ಜನರು ಸಾಕಷ್ಟು ಸಂಕಷ್ಟವನ್ನು ಎದುರಿಸುವಂತಾಗಿದೆ.ಫೆಬ್ರವರಿಯಲ್ಲಿ ಶಿಲಾನ್ಯಾಸ: 2.50 ಕೋಟಿ ರು. ವೆಚ್ಚದ ಈ ಕಿರು ಸೇತುವೆಗೆ ಫೆ.10ರಂದು ಕೊನೆಗೂ ಕಾಲ ಕೂಡಿಬಂದು ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಇಲ್ಲಿ ಮತ್ತೆ ಬೇರೆ ಬೇರೆ ಫ್ಲೆಕ್ಸ್ ಗಳು ರಾರಾಜಿಸಿದವು.ಕೊನೆಗೂ ಏ.16ರಂದು ಕಾಮಗಾರಿ ಆರಂಭವಾಯಿತು. ಈ ಸಮಯ ಮಳೆಗಾಲದೊಳಗೆ ಕಾಮಗಾರಿ ಮುಗಿಯಬಹುದೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿ ಬಂತು. ಗುತ್ತಿಗೆದಾರರು ಹಾಗೂ ಇಲಾಖೆಯಿಂದ ಕಾಮಗಾರಿ ಮಳೆ ಆರಂಭದೊಳಗೆ ಪೂರ್ಣಗೊಳ್ಳುವ ಕುರಿತು ಊರಿನವರಿಗೆ ಭರವಸೆ ಸಿಕ್ಕಿತ್ತು. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಇದೀಗ ಕೇವಲ ತಡೆಗೋಡೆಯ ಕೆಲಸ ನಡೆಯುತ್ತಿದೆ. ಇದಕ್ಕೆ ಬೇಕಾದ ಸ್ಲ್ಯಾಬ್ ಅಳವಡಿಸುವ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ.ಮೊದಲಿಗೆ ಹಳೆ ಸೇತುವೆ ತೆರೆವುಗೊಳಿಸದೆ ಹೊಸ ಸೇತುವೆ ನಿರ್ಮಿಸುವ ಕುರಿತು ಕೇಳಿಬಂದಿತ್ತು. ಆದರೆ ಬಳಿಕ ಹಳೆ ಸೇತುವೆಯನ್ನು ತೆರೆವುಗೊಳಿಸಿ, ಬದಿಯಲ್ಲಿ ಹಳ್ಳಕ್ಕೆ ಮೋರಿಗಳನ್ನು ಅಳವಡಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು ಮಂಗಳವಾರ ಸಂಜೆ ಹಳ್ಳದಲ್ಲಿ ಹೆಚ್ಚಿನ ನೀರು ಹರಿದು ಪರಿಣಾಮ ರಸ್ತೆ ಸುಮಾರು ಐದು ಅಡಿ ಆಳದಷ್ಟು ಕೊಚ್ಚಿ ಹೋಗಿ ಜನರು ಕಾಲ್ನಡಿಗೆಯಲ್ಲಿ ಹೋಗಬೇಕಾದರೂ ಅಸಾಧ್ಯ ಸ್ಥಿತಿ ನಿರ್ಮಾಣವಾಗಿತ್ತು.ಶಾಸಕರ ಸ್ಪಂದನೆ: ಈ ಪ್ರದೇಶದ ಜನರು ತಾತ್ಕಾಲಿಕ ಸೇತುವೆ ಕುಸಿದು ಹೋದ ಕಾರಣ ಹಲವಾರು ಕಿ.ಮೀ. ಸುತ್ತು ಬಳಸಿನ ರಸ್ತೆಗಳ ಮೂಲಕ ಕ್ರಮಿಸಬೇಕಿತ್ತು. ಶಾಲಾ ಮಕ್ಕಳಿಗಂತೂ ಇದು ಬಹು ದೊಡ್ಡ ಸಮಸ್ಯೆಯಾಗಿತ್ತು. ಶಾಸಕ ಹರೀಶ್ ಪೂಂಜ ಹಳ್ಳಕ್ಕೆ ದೊಡ್ಡ ಗಾತ್ರದ ಮೋರಿಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲು ಸ್ಪಂದಿಸಿದರು. ಇದರಿಂದ ಇಲ್ಲಿನ ಜನರು ಮತ್ತೆ ಈ ರಸ್ತೆಯ ಮೂಲಕ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.

*ಅಂಬಡಬೆಟ್ಟುವಿನ ಕಿರು ಸೇತುವೆ ಕಾಮಗಾರಿಯನ್ನು ವೇಗವಾಗಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸದ್ಯ ಇಲ್ಲಿನ ಜನರಿಗೆ ಬದಲಿ ಮಾರ್ಗಗಳಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದ್ದು ಮುಂದಿನ 40ದಿನಗಳ ಅವಧಿಯಲ್ಲಿ ಹೊಸ ಸೇತುವೆಯನ್ನು ಸಂಚಾರಕ್ಕೆ ಸಿದ್ಧಪಡಿಸಲು ಪ್ರಯತ್ನಿಸಲಾಗುತ್ತಿದೆ. -ರಾಘವೇಂದ್ರ ರಾವ್, ಇಇ, ಲೋಕೋಪಯೋಗಿ ಇಲಾಖೆ, ದಕ

*ಅಂಬಡಬೆಟ್ಟು ಹಳ್ಳಕ್ಕೆ ಹೊಸ ಸೇತುವೆ ನಿರ್ಮಾಣ ಶೀಘ್ರ ಆಗಬೇಕಿದೆ. ಇಲ್ಲಿನ ಸೇತುವೆ ನಿರ್ಮಾಣ ಬಹು ವರ್ಷದ ಬೇಡಿಕೆಯಾಗಿದೆ. ಇದೀಗ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿರುವ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಬೇಕಾದ ವ್ಯವಸ್ಥೆಯನ್ನು ಶಾಸಕ ಹರೀಶ್ ಪೂಂಜ ಮಾಡಿಕೊಟ್ಟಿದ್ದು ಈ ಭಾಗದ ಜನರಿಗೆ ಅನುಕೂಲವಾಗಿದೆ. -ಜಯಂತಗೌಡ, ಸ್ಥಳೀಯರು, ಗುರಿಪಳ್ಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಗಿರಿ ಬೆಟ್ಟದಲ್ಲಿ ಧರ್ಮಭೂಷಣ ಜಿನೈಕ್ಯ
ವಿದ್ಯುತ್ ಖಾಸಗೀಕರಣ: ತೀವ್ರಗೊಂಡ ವಿರೋಧ