ಕನ್ನಡಪ್ರಭ ವಾರ್ತೆ ನರಗುಂದ ಪಟ್ಟಣದ ಸಿದ್ದನಬಾವಿ ಓಣಿಯ ರೈತರು ಮಳೆಗಾಗಿ ಶ್ರೀ ಯಲ್ಲಮ್ಮದೇವಿಗೆ ಪೂಜೆ ಸಲ್ಲಿಸಿ, ಅಂಬಲಿ ಪ್ರಸಾದವನ್ನು ತಯಾರಿಸಿ ಮಾರುಕಟ್ಟೆ ಪ್ರದೇಶದಲ್ಲಿನ ಗಾಂಧಿ ವೃತ್ತ ಮತ್ತು ಬಸವೇಶ್ವರ ವೃತ್ತದಲ್ಲಿ ಜನರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರೈತ ಶೇಖಪ್ಪ ಜಗದ ಮಾತನಾಡಿ, ಹಿಂಗಾರಿ ಹಂಗಾಮಿನಲ್ಲಿ ಕಡಲೆ, ಜೋಳ ಇತರ ಬೀಜಗಳನ್ನು ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಮಳೆಯಾಗದೇ ಇದ್ದ ಕಾರಣ ಕಾಳಗಳು ಮೊಳಕೆ ಒಡೆಯುತ್ತಿಲ್ಲ. ಸದ್ಯ ಮಳೆ ಅತಿ ಅವಶ್ಯವಿದೆ. ಮಳೆ ಆಗಲೆಂದು ರೈತರ ದೇವರ ಮೊರೆ ಹೋಗಿದ್ದಾರೆ. ಅಂಬಲಿ ಪ್ರಸಾದವನ್ನು ದೇವಿ ದೇವಸ್ಥಾನದ ಆವರಣದಲ್ಲಿ ತಯಾರಿಸಿ ಮಾರುಕಟ್ಟೆ ಪ್ರದೇಶಕ್ಕೆ ತಂದು ವಿತರಿಸಿದ್ದೇವೆ. ಪ್ರಸಾದ ಸ್ವೀಕರಿಸಿದ ಪ್ರತಿಯೊಬ್ಬ ರೈತ ಮಳೆ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಅಂಬಲಿ ಪ್ರಸಾದ ಸ್ವೀಕರಿಸಿದ ಜನರು ಮಳೆಗಾಗಿ ದೇವಿಯಲ್ಲಿ ಪ್ರಾರ್ಥಿಸಿದರು. ಮಳೆ ಆಗದಿದ್ದರೆ ಕುಡಿಯುವ ನೀರು, ಆಹಾರದ ಕೊರತೆ ಉಂಟಾಗುತ್ತದೆ. ಆಪತ್ತಿನಿಂದ ಜನರನ್ನು ರಕ್ಷಿಸುವಂತೆ ದೇವಿಯಲ್ಲಿ ಬೇಡಿಕೊಂಡರು. ಸಂಗಪ್ಪ ಪೂಜಾರ, ಮಲ್ಲಿಕಾರ್ಜುನ ಗಡೇಕಾರ, ಈರಪ್ಪ ಗಡೇಕಾರ, ಯಲ್ಲಪ್ಪ ಸೂರ್ಯವಂಶಿ, ತಿಪ್ಪಣ್ಣ ಗಡೇಕಾರ, ಶಿವಪುತ್ರಪ್ಪ ಸವದತ್ತಿ, ಶಿವಾಜಿ ಸೂರ್ಯವಂಶಿ, ಶಿವಯ್ಯ ಗಣಾಚಾರಿ, ಶೇಕಪ್ಪ ಅಕ್ಕಿ, ಚಿನ್ನಪ್ಪ ಸವದತ್ತಿ, ಶರಣಪ್ಪ ಹಟ್ಟಿ, ಶಿವಾನಂದ ಚವ್ಹಾಣ, ಮಲ್ಲಿಕಾರ್ಜುನ ಅಣ್ಣಿಗೇರಿ, ಚನ್ನು ದೇಸಾಯಿ, ಆನಂದ ಮೋಟೆ, ಯಲ್ಲಪ್ಪ ಗಡೇಕಾರ, ಹಜರೇಸಾಬ್ ಕಿಲ್ಲೇದಾರ, ಮಾಬುಸಾಬ್ ಕಿಲೇದಾರ, ಮೌಲಾಸಾಬ್ ಬೆಟಗೇರಿ, ಪ್ರಕಾಶ ಮೀಶಿ ಉಪಸ್ಥಿತರಿದ್ದರು.