ಶಿವಮೊಗ್ಗ ದಸರಾ: ಆನೆ ಬದಲು ಅಲಂಕೃತ ವಾಹನದಲ್ಲಿ ಅಂಬಾರಿ ಮೆರವಣಿಗೆ

KannadaprabhaNewsNetwork | Published : Oct 25, 2023 1:15 AM

ಸಾರಾಂಶ

ಜನಮನ ಸೆಳೆದ ಸಾಗರ, ಹೇಮಾವತಿ ಆನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಳೆದ 9 ದಿನಗಳಿಂದ ನಗರದಲ್ಲಿ ಏರ್ಪಡಿಸಿದ್ದ ವೈಭವದ ಶಿವಮೊಗ್ಗ ದಸರಾ ವಿಜಯದಶಮಿ ಮಂಗಳವಾರ ಸಂಪನ್ನಗೊಂಡಿತು. ಅ.14ರಿಂದ ಆರಂಭಗೊಂಡಿದ್ದ ದಸರಾ ಕಾರ್ಯಕ್ರಮಗಳು ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಬನ್ನಿ ಮುಡಿಯುವ ಸಮಾರಂಭದೊಂದಿಗೆ ಮುಕ್ತಾಯವಾಯಿತು. ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಎದುರು ಮಧ್ಯಾಹ್ನ 2.45ಕ್ಕೆ ಸಂಸದ ಬಿ.ವೈ.ರಾಘವೇಂದ್ರ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಪಾಲಿಕೆ ಮೇಯರ್ ಶಿವಕುಮರ್ ಉಪಮೇಯರ್ ಲಕ್ಷ್ಮೀ ಶಂಕರ್ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಇದ್ದರು. ಅಲಂಕೃತ ವಾಹನದಲ್ಲಿ ಅಂಬಾರಿ ಮೆರವಣಿಗೆ: ಈ ಬಾರಿಯ ದಸರಾ ಉತ್ಸವದಲ್ಲಿ ಅಂಬಾರಿ ಮೆರವಣಿಗೆಗಾಗಿ ಸಕ್ರೆಬೈಲಿನಿಂದ ಮೂರು ಆನೆಗಳನ್ನು ಕರೆತಂದು ನಾಲ್ಕು ದಿನಗಳ ಕಾಲ ನಗರದಲ್ಲಿ ತಾಲೀಮು ನೀಡಲಾಗಿತ್ತು. ಆದರೆ, ಕಡೆ ಘಳಿಗೆಯಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಬೇಕಿದ್ದ ನೇತ್ರಾವತಿ ಆನೆ ಹೆಣ್ಣುಮರಿಗೆ ಜನ್ಮ ನೀಡಿತು. ಈಗಾಗಿ ಈ ಬಾರಿ ಆನೆ ಅಂಬಾರಿ ಬದಲು ಅಲಂಕೃತ ವಾಹನದಲ್ಲಿ ಅಂಬಾರಿ ಮೆರವಣಿಗೆ ನಡೆಯಿತು. ಆದರೂ ನೇತ್ರಾವತಿ ಅನುಪಸ್ಥಿತಿಯಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಸಾಗರ ಹಾಗೂ ಹೇಮಾವತಿ ಆನೆಗಳು ಜನರನ್ನು ಆರ್ಕಷಿಸಿದವು. ನಗರದ ನಾನಾ ದೇವಸ್ಥಾನಗಳ 50ಕ್ಕೂ ಹೆಚ್ಚು ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು. ವಿದ್ಯುತ್ ಅಲಂಕೃತ ವಾಹನದಲ್ಲಿ ಆಗಮಿಸಿದ್ದ ಉತ್ಸವ ಮೂರ್ತಿಗಳ ಮೆರವಣಿಗೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ಶಿವಪ್ಪ ನಾಯಕನ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್‌ ರಸ್ತೆ ಮಾರ್ಗವಾಗಿ ಫ್ರೀಡಂಪಾರ್ಕ್‌ ತಲುಪಿತು. ಮೆರವಣಿಗೆಯುದ್ದಕ್ಕೂ ಮಂಗಳವಾದ್ಯ, ನಂದಿ ಧ್ವಜ ಕುಣಿತ, ಚಂಡೆ, ಮಹಿಳಾ ಕೋಲಾಟ, ಯಕ್ಷಗಾನ, ಗೊಂಬೆ, ವೀರಗಾಸೆ, ಮಹಿಳೆಯರ ಡೊಳ್ಳು ಕುಣಿತ, ಹುಲಿವೇಷ, ನಾದಸ್ವರ ಮತ್ತಿತರ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಮೆರವಣಿಗೆ ಸಾಗುವ ಮಾರ್ಗದಲ್ಲಿ ನೀರು ಹಾಕಿ ರಂಗೋಲಿ ಬಿಡಿಸಲಾಗಿತ್ತು. ಬನ್ನಿ ಮುಡಿದ ತಹಸೀಲ್ದಾರ್: ಫ್ರೀಡಂ ಪಾರ್ಕ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದ ನಡುವೆ ತಹಸೀಲ್ದಾರ್ ಎನ್‌.ಜೆ. ನಾಗರಾಜ್ ಬಾಳೆಕಂಬ (ಅಂಬು) ಕತ್ತರಿಸುವ ಮೂಲಕ ಬನ್ನಿ ಮುಡಿಯುವ ಸಂಪ್ರದಾಯ ಆಚರಣೆ ಸಂಪನ್ನಗೊಳಿಸಿದರು. ಈ ಕ್ಷಣ ಕಣ್ಣು ತುಂಬಿಕೊಳ್ಳಲು ಕಾಯುತ್ತಿದ್ದ ಜನತೆ ಅದರಲ್ಲೂ ಯುವಕರು ಮರದ ತಡೆಯನ್ನು ದಾಟಿ ವೇದಿಕೆಯತ್ತ ನುಗ್ಗಿ ಬಾಳೆಕಂದು, ಎಲೆಗಳ ಪಡೆಯಲು ಮುಗಿಬಿದ್ದರು. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ನಿಯಂತ್ರಿಸಿದರು. ಬನ್ನಿ ಮುಡಿದ ನಂತರ ಸ್ಥಳದಲ್ಲಿದ್ದವರು ಪರಸ್ಪರ ಆಲಂಗಿಸಿಕೊಳ್ಳುವ, ಕೈ ಕುಲುಕುವ ಮೂಲಕ ವಿಜಯ ದಶಮಿಯ ಶುಭಾಶಯ ಕೋರಿದರು. ಸೂಕ್ತ ವ್ಯವಸ್ಥೆ: ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‌ ಸುತ್ತ ಪಾಲಿಕೆ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಎತ್ತರದಲ್ಲಿ ಭಾರೀ ಸಾಮರ್ಥ್ಯದ ನಾಲ್ಕು ವಿದ್ಯುತ್ ದೀಪಗಳು, ಮೈದಾನದೊಳಗೆ ಬರಲು ಮತ್ತು ಹೋಗಲು ಮೂರು ಗೇಟು ತೆರೆಯಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಬನ್ನಿ ಪತ್ರೆ ಮಾರಾಟ ಜೋರಾಗಿತ್ತು. ಕಾರ್ಯಕ್ರಮದ ನಂತರ ನಡೆದ ಆಕರ್ಷಕ ಪಟಾಕಿ ಸಿಡಿತ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು. ಗಣ್ಯರ ಉಪಸ್ಥಿತಿ: ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಮೇಯರ್‌ ಎಸ್‌.ಶಿವಕುಮಾರ್‌, ಉಪಮೇಯರ್‌ ಲಕ್ಷ್ಮೀ ಶಂಕರ್‌ ನಾಯ್ಕ್‌, ಸದಸ್ಯರಾದ ಎಚ್‌.ಸಿ.ಯೋಗೇಶ್‌ ಸೇರಿದಂತೆ ಹಲವರು ಹಾಜರಿದ್ದರು. - - - -24ಎಸ್ಎಂಜಿಕೆಪಿ03: ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಕಂಡು ಬಂದ ಹುಲಿಕುಣಿತ. -24ಎಸ್ಎಂಜಿಕೆಪಿ04: ಶಿವಮೊಗ್ಗದ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಎದುರು ಸಂಸದ ಬಿ.ವೈ.ರಾಘವೇಂದ್ರ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು. -24ಎಸ್ಎಂಜಿಕೆಪಿ05: ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸಕ್ರೆಬೈಲು ಆನೆ ಬಿಡಾರದ ಸಾಗರ ಹಾಗೂ ಹೇಮಾವತಿ ಆನೆಗಳು ಹೆಜ್ಜೆ ಹಾಕಿದವು. -24ಎಸ್ಎಂಜಿಕೆಪಿ06: ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಗಮನ ಸೆಳೆದ ಮಹಿಳಾ ಡೊಳ್ಳುಕುಣಿತ. -24ಎಸ್ಎಂಜಿಕೆಪಿ07: ಶಿವಮೊಗ್ಗದ ಬಿ.ಎಚ್‌.ರಸ್ತೆಯಲ್ಲಿರುವ ಮೈಲಾರೇಶ್ವರ ದೇವಸ್ಥಾನದ ಬಳಿ ಬೆಳ್ಳಿ ಅಂಬಾರಿಯ ಚಾಮುಂಡೇಶ್ವರಿ ವಿಗ್ರಹಕ್ಕೆ ಸಂಸದ ಬಿ.ವೈ.ರಾಘವೇಂದ್ರ ಪುಷ್ಪನಮನ ಸಲ್ಲಿಸಿದರು. -24ಎಸ್ಎಂಜಿಕೆಪಿ08: ಶಿವಮೊಗ್ಗ ಪ್ರೀಡಂ ಪಾರ್ಕ್‌ನಲ್ಲಿ ತಹಸೀಲ್ದಾರ್ ಎನ್‌.ಜೆ.ನಾಗರಾಜ್ ಬಾಳೆ ಕಂಬ (ಅಂಬು) ಕತ್ತರಿಸುವವ ಮೂಲಕ ಬನ್ನಿ ಮುಡಿದರು. -24ಎಸ್ಎಂಜಿಕೆಪಿ09: ಶಿವಮೊಗ್ಗ ಪ್ರೀಡಂ ಪಾರ್ಕ್‌ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ.

Share this article