- ತಾಲೂಕು, ಗ್ರಾಮೀಣ ಭಾಗಕ್ಕೆ ತೆರಳುವರಿಗೆ ಸರ್ವೀಸ್ ರಸ್ತೆಯೇ ಗತಿ - ನಿರ್ಗಮನ ಸ್ಥಳದಲ್ಲಿ ಕಲ್ಲುಗಳನ್ನು ಜೋಡಿಸಿಟ್ಟು ನಿರ್ಬಂಧ ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮಂಡ್ಯ ಮಂಡ್ಯದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಹೆದ್ದಾರಿಯುದ್ದಕ್ಕೂ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುವುದಕ್ಕೆ ನೀಡಲಾಗಿದ್ದ ನಿರ್ಗಮನ ಸ್ಥಳಗಳನ್ನು ಬಂದ್ ಮಾಡಿರುವುದರಿಂದ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲೇ ಸಂಚರಿಸುವುದು ಅನಿವಾರ್ಯವಾಗಿದೆ. ಮಂಡ್ಯ ಕಡೆಯಿಂದ ಇಂಡುವಾಳು, ತೂಬಿನಕೆರೆ, ಕಾಳೇನಹಳ್ಳಿ ಬಳಿ ವಾಹನ ಸವಾರರ ಆಗಮನ- ನಿರ್ಗಮನಕ್ಕೆ ಅವಕಾಶ ನೀಡಲಾಗಿತ್ತು. ಈಗ ಆ ಪಾಯಿಂಟ್‌ಗಳಲ್ಲಿ ಕಲ್ಲುಗಳನ್ನು ಜೋಡಿಸಿಡಲಾಗಿದೆ. ಇಂಡುವಾಳು ಬಳಿ ಎಕ್ಸ್‌ಪ್ರೆಸ್ ವೇ ಹತ್ತುವುದಕ್ಕಷ್ಟೇ ಅವಕಾಶ ನೀಡಿದ್ದು, ಉಳಿದಂತೆ ಮೈಸೂರುವರೆಗೆ ಎಲ್ಲಿಯೂ ಸರ್ವೀಸ್ ರಸ್ತೆಗೆ ತೆರಳುವುದಕ್ಕೆ ಅವಕಾಶ ನೀಡಿಲ್ಲ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಜಿಲ್ಲಾ, ತಾಲೂಕು, ಗ್ರಾಮೀಣ ಪ್ರದೇಶಗಳಿಗೆ ತೆರಳುವ ವಾಹನ ಸವಾರರಿಗೆ ಆಗಮನ- ನಿರ್ಗಮನ (ಎಂಟ್ರಿ-ಎಕ್ಸಿಟ್)ಕ್ಕೆ ಅವಕಾಶ ಕೊಟ್ಟಿರಲಿಲ್ಲ. ಬೆಂಗಳೂರಿನಿಂದ ಮೈಸೂರುವರೆಗೆ ನೇರವಾಗಿ ವಾಹನಗಳಲ್ಲಿ ತೆರಳುವವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರ ವಿರುದ್ಧ ಸ್ಥಳೀಯರಿಂದ ಪ್ರತಿಭಟನೆ, ಹೋರಾಟಗಳು ನಡೆದ ನಂತರ ಜಿಲ್ಲಾ, ತಾಲೂಕು ಕೇಂದ್ರದ ಜೊತೆಗೆ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕ ಕಲ್ಪಿಸುವುದಕ್ಕೂ ಹೆದ್ದಾರಿಯಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆ ಜಾರಿಯಾದ ನಂತರದಲ್ಲಿ ಟೋಲ್ ಶುಲ್ಕವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಬೆಂಗಳೂರು, ಮಂಡ್ಯ, ಮದ್ದೂರು, ರಾಮನಗರ ಸೇರಿದಂತೆ ಇತರೆ ಭಾಗಗಳಿಂದ ಬರುವ ವಾಹನ ಸವಾರರು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಸರ್ವೀಸ್ ರಸ್ತೆಗೆ ಜಾರಿಕೊಳ್ಳುತ್ತಿದ್ದರು. ಇದರಿಂದ ಟೋಲ್ ಪ್ಲಾಜಾದಲ್ಲಿ ನಿರೀಕ್ಷಿಸಿದಷ್ಟು ವಾಹನಗಳಿಂದ ಶುಲ್ಕ ಸಂಗ್ರಹವಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಟೋಲ್ ಪ್ಲಾಜಾದವರು ಮಂಡ್ಯದಿಂದ ಮೈಸೂರು ಕಡೆಗೆ ನೀಡಲಾಗಿದ್ದ ಎಕ್ಸಿಟ್‌ಗಳನ್ನು ಮುಚ್ಚಿದ್ದಾರೆ. ಇದರಿಂದ ಮೈಸೂರಿನಿಂದ ಮಂಡ್ಯಕ್ಕೆ, ಮಂಡ್ಯದಿಂದ ಮೈಸೂರಿಗೆ ಹೋಗಲು ವಾಹನ ಸವಾರರು ಪರದಾಡುವಂತಾಗಿದ್ದು ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಂಗಳೂರಿನಿಂದ ಮದ್ದೂರು ಗಡಿ ಭಾಗವಾದ ನಿಡಘಟ್ಟದಿಂದ ಮಂಡ್ಯಕ್ಕೆ ಬರುವ ಮಾರ್ಗದಲ್ಲಿ ಹಲವೆಡೆ ತಾಲೂಕು ಕೇಂದ್ರ, ಗ್ರಾಮೀಣ ಪ್ರದೇಶಕ್ಕೆ ತೆರಳಲು ನೀಡಿದ್ದ ಎಂಟ್ರಿ-ಎಕ್ಸಿಟ್ ಪಾಯಿಂಟ್‌ಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಎಕ್ಸಿಟ್ ಪಾಯಿಂಟ್‌ಗಳಲ್ಲಿ ಕಲ್ಲುಗಳ ಜೋಡಣೆ: ಎಕ್ಸಿಟ್ ಪಾಯಿಂಟ್‌ಗಳಲ್ಲಿ ವಾಹನಗಳು ಸುಲಭವಾಗಿ ತೆರಳಲು ಅವಕಾಶವಾಗದಂತೆ ಕಲ್ಲುಗಳನ್ನು ಜೋಡಿಸಿಡಲಾಗಿದೆ. ಒಂದು ಸಣ್ಣ ಕಾರು ಮಾತ್ರ ಹೋಗಲು ಇಲ್ಲಿ ಅವಕಾಶವಿದ್ದರೂ ಎಕ್ಸ್‌ಪ್ರೆಸ್ ವೇನಲ್ಲಿ ವೇಗವಾಗಿ ವಾಹನಗಳು ಬರುವುದರಿಂದ ವಾಹನಗಳು ಎಕ್ಸ್‌ಪ್ರೆಸ್ ವೇನಿಂದ ಸರ್ವೀಸ್ ರಸ್ತೆಗೆ ಇಳಿಯುವುದಕ್ಕೆ ಹಿಂದಕ್ಕೆ ಮುಂದಕ್ಕೆ ನಿಧಾನವಾಗಿ ಸಾಗುತ್ತಾ ಬರಬೇಕು. ಇದು ಅಪಾಯಕಾರಿಯೂ ಆಗಿದೆ. ಜೊತೆಗೆ ಈ ಸಮಯದಲ್ಲಿ ಕಾರುಗಳಿಗೆ ಹಾನಿ ಉಂಟಾಗುವ ಸಾಧ್ಯತೆಗಳಿವೆ. ಆದ ಕಾರಣ ವಾಹನ ಸವಾರರು ಈ ಸಾಹಸ ನಡೆಸದೆ ಸರ್ವೀಸ್ ರಸ್ತೆಯಲ್ಲೇ ತೆರಳುತ್ತಿದ್ದಾರೆ. ಕಿರಿದಾಗಿರುವ ಸರ್ವೀಸ್ ರಸ್ತೆ: ಹೆದ್ದಾರಿಯಲ್ಲಿದ್ದ ಎಂಟ್ರಿ- ಎಕ್ಸಿಟ್‌ಗಳನ್ನು ಬಂದ್ ಮಾಡಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಜೊತೆಗೆ ಸರ್ವೀಸ್ ರಸ್ತೆ ಕಿರಿದಾಗಿರುವುದರಿಂದ ಕಾರುಗಳು, ಬಸ್ಸುಗಳು ಸಂಚರಿಸುವುದಕ್ಕೆ ಕಷ್ಟವಾಗುತ್ತಿದೆ. ಇಕ್ಕಟ್ಟಾಗಿರುವ ಸರ್ವೀಸ್ ರಸ್ತೆಯಲ್ಲಿ ಸಾಗುವುದು ವಾಹನ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ವೀಸ್ ರಸ್ತೆಯಲ್ಲಿ ಒಂದು ವಾಹನ ಹೋಗುವುದಕ್ಕೆ ಸಾಲುವಷ್ಟು ಜಾಗವಿದೆ. ಹೆಚ್ಚೆಂದರೆ ವಾಹನದ ಪಕ್ಕ ಒಂದು ಸ್ಕೂಟರ್ ಅಥವಾ ಬೈಕ್ ಹೋಗಬಹುದು. ಎರಡು ವಾಹನಗಳು ಸಲೀಸಾಗಿ ಸಾಗುವುದಕ್ಕೆ ಸರ್ವೀಸ್ ರಸ್ತೆಯಲ್ಲಿ ಜಾಗವೇ ಇಲ್ಲ. ಸರ್ವೀಸ್ ರಸ್ತೆಯನ್ನು ಅಗಲೀಕರಣ ಮಾಡುವ ಕೆಲಸ ಆರಂಭಗೊಂಡಿಲ್ಲ. ಬಹುತೇಕ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ. ಸರ್ವೀಸ್ ರಸ್ತೆ ನಿರ್ಮಿಸಿರುವ ಅನೇಕ ಕಡೆ ಫುಟ್‌ಪಾತ್ ನಿರ್ಮಾಣ ಮಾಡದೆ ಹಾಗೇ ಬಿಡಲಾಗಿದೆ. ಇಂತಹ ಅವ್ಯವಸ್ಥಿತ ಸರ್ವೀಸ್ ರಸ್ತೆಯಲ್ಲಿ ಈಗ ವಾಹನಗಳು ಒಂದಕ್ಕೊಂದು ಅಂಟಿಕೊಂಡೇ ಸಾಗಬೇಕಿರುವುದು ಅನಿವಾರ್ಯವಾಗಿದೆ. --------------- ಎಕ್ಸ್‌ಪ್ರೆಸ್-ವೇನಲ್ಲಿ ನೀಡಿದ್ದ ಎಕ್ಸಿಟ್ ಬಂದ್ ಮಾಡಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಹೆಚ್ಚು ಸಂಚರಿಸುತ್ತಿವೆ. ಸರ್ವೀಸ್ ರಸ್ತೆ ತುಂಬಾ ಕಿರಿದಾಗಿದೆ. ಎರಡು ವಾಹನಗಳು ಏಕಕಾಲಕ್ಕೆ ಚಲಿಸಲು ಸಾಧ್ಯವಾಗದಷ್ಟು ಇಕ್ಕಟ್ಟಾಗಿದೆ. ಈ ರಸ್ತೆಯಲ್ಲಿ ವಾಹನಗಳು ಸಾಗುವುದು ಕಷ್ಟವಾಗಿದೆ. ಹಲವೆಡೆ ಫುಟ್‌ಪಾತ್ ನಿರ್ಮಿಸಿಲ್ಲ. ಈ ಸರ್ವೀಸ್ ರಸ್ತೆಯ ಪಕ್ಕದಲ್ಲಿ ನೆಲೆಸಿರುವ ಜನರು ಜೀವ ಭಯದಲ್ಲಿ ಬದುಕುವಂತಾಗಿದೆ. - ಶ್ರೀಧರ್, ತೂಬಿನಕೆರೆ