ಕನ್ನಡಪ್ರಭ ವಾರ್ತೆ ಬೇಲೂರು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ತೀರ್ಥಪ್ಪ ಮನವಿ ಮಲೆನಾಡು ಭಾಗಗಳಲ್ಲಿ ಇರುವ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿದೆ ಎಂದು ಏಕಾಂಗಿ ಹೋರಾಟಗಾರ ತೀರ್ಥಪ್ಪ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿದರು. ಈ ವೇಳೆ ಮಾತನಾಡಿದ ಅವರು, ತಾಲೂಕಿನ ಕೆಸಗೋಡು ಗ್ರಾಮದಲ್ಲಿ ಇರುವಂತಹ ಸರ್ಕಾರಿ ಆಸ್ಪತ್ರೆ ತೀವ್ರ ಹದಗಟ್ಟಿದ್ದು ಅಲ್ಲಿ ದನದ ಹಾಗೂ ನಾಯಿಗಳ ವಾಸಸ್ಥಾನವಾಗಿದೆ. ಅಲ್ಲದೆ ಇಲ್ಲಿವರೆಗೂ ಯಾವುದೇ ಅಧಿಕಾರಿಗಳು ನಮ್ಮ ಗ್ರಾಮದ ಸಮಸ್ಯೆ ಆಲಿಸುತ್ತಿಲ್ಲ.ಅಷ್ಟೇ ಅಲ್ಲದೆ ಬಿಕ್ಕೋಡು ನಾಗೇನಹಳ್ಳಿ ಹಾಗೂ ಗೆಂಡೇಹಳ್ಳಿ ಆಸ್ಪತ್ರೆಯಲ್ಲೂ ಸಹ ಅವ್ಯವಸ್ಥೆಯಿಂದ ಕೂಡಿದೆ ಇನ್ನು ರಾತ್ರಿ ಸಮಯದಲ್ಲಿ ಏನಾದರೂ ತೊಂದರೆಯಾದರೆ ಒಬ್ಬ ವೈದ್ಯರೂ ಇರುವುದಿಲ್ಲ. ವೈದ್ಯರು ವಾಸಿಸಲು ಕ್ವಾಟರ್ಸ್ ಸಹ ಇಲ್ಲದೆ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರಿಗೆ ಹೇಳಿದರೂ ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ನಮ್ಮ ಮಲೆನಾಡು ಭಾಗಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿದ್ದರೆ ಅಹೋರಾತ್ರಿ ಜಿಲ್ಲಾಧಿಕಾರಿ ಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.