ಲಿಂಗಸುಗೂರು: ತಾಲೂಕಿನ ಹಟ್ಟಿ ಚಿನ್ನದ ಗಣಿ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಲಘು ಭೂ ಕಂಪವಾಗಿರುವ ಘಟನೆ ಸೋಮವಾರ ಸಂಭವಿಸಿದ್ದು, ಕಡಿಮೆ ಪ್ರಮಾಣದಲ್ಲಿ ಭೂ ಕಂಪಿಸಿರುವ ಕಾರಣಕ್ಕೆ ಯಾವುದೇ ರೀತಿಯ ಅನಾವುತ ಜರುಗಿಲ್ಲ. ಹಟ್ಟಿ ಚಿನ್ನದ ಗಣಿ, ನಲೋಗಲ್, ವೀರಾಪು ಹಾಗೂ ಗಜ್ಜಲಗಟ್ಟ ಗ್ರಾಮಗಳಲ್ಲಿ ಸೋಮವಾರ ಮಧ್ಯರಾತ್ರಿ 2.51 ಸುಮಾರಿಗೆ ಭೂಮಿ ಕಂಪವಾಗಿದ್ದು, ಕೇವಲ 2.7 ತೀವ್ರತೆಯ ಭೂಕಂಪ ಸುಮಾರು 2.6 ಕಿಮೀ ವ್ಯಾಪ್ತಿಯಲ್ಲಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಕಡಿಮೆ ಪ್ರಮಾಣದಲ್ಲಿ ಭೂಕಂಪವಾಗಿದ್ದರಿಂದ ಜನಸಾಮಾನ್ಯರ ಅನುಭವಕ್ಕೆ ಬಂದಿಲ್ಲ. ತೀರಾ ಕಡಿಮೆ ಪ್ರಮಾಣದಲ್ಲಿ ಭೂಕಂಪನವಾಗಿದ್ದು, ಇದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.