ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಗದ್ದೆಯ ಬಯಲಲ್ಲಿ ಮೇಯಲು ಬಿಟ್ಟಿದ್ದ ಹಸು ಮೇಲೆ ಹಾಡ ಹಗಲೇ ದಾಳಿ ನಡೆಸಿದ ಹುಲಿ, ಅದನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಬಿಟ್ಟಂಗಾಲ ಸಮೀಪದ ಅಂಬಟ್ಟಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಂಬಟ್ಟಿ ಗ್ರಾಮದ ಕಿಕ್ಕರೆ ಎಚ್. ತೌಪಿಕ್ ಎಂಬವರಿಗೆ ಸೇರಿದ ಆರು ವರ್ಷ ಪ್ರಾಯದ ಅಡ್ಡತಳಿಯ ಹಸು ಹುಲಿ ದಾಳಿಗೆ ಸಿಲುಕಿ ಸಾವಿನಿಂದ ಪಾರಾಗಿದ್ದರೂ ಇದೀಗ ಗಂಭೀರ ಗಾಯದೊಂದಿಗೆ ಸಾವು ಬದುಕಿನೊಂದಿಗೆ ಹೋರಾಡುತ್ತಿದೆ.ತನ್ನ ಮನೆಯ ಸಮೀಪದಲ್ಲಿರುವ ಅಬ್ಬಿಮೂಲೆ ಎಂಬ ಗದ್ದೆಬಯಲಿನಲ್ಲಿ ಎಂದಿನಂತೆ ಹಸುವನ್ನು ಮೇಯಲು ಬಿಟ್ಟಿದ್ದ ತೌಫಿಕ್, ಸಂಜೆ ವೇಳೆ ಹಸುವನ್ನು ಮನೆಗೆ ಕರೆತರಲು ಸ್ಥಳಕ್ಕೆ ತೆರಳಿದಾಗ ಹಸು ಪತ್ತೆಯಾಗಲಿಲ್ಲ. ಇದರಿಂದ ಸಂಶಯಗೊಂಡ ತೌಫೀಕ್, ಸಮೀಪದ ತೋಟಕ್ಕೆ ತೆರಳಿ ನೋಡಿದಾಗ ತೀವ್ರ ರಕ್ತಸ್ರಾವದೊಂದಿಗೆ ಹಸು ನರಳಾಡುತ್ತಿತ್ತು ಎನ್ನಲಾಗಿದೆ. ಮಧ್ಯಾಹ್ನದ ನಂತರ ಅಂದಾಜು 3.30ರ ಸಮಯದಲ್ಲಿ ಏಕಾಏಕಿ ದಾಳಿ ನಡೆಸಿದ ಹುಲಿ ಹಸುವಿನ ಹಿಂದಿನ ಭಾಗಕ್ಕೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಈ ಸಂದರ್ಭ ಹಸು ತೀವ್ರ ಪ್ರತಿರೋಧ ಒಡ್ಡಿದಾಗ ದಾಳಿಯನ್ನು ಮುಂದುವರಿಸದೆ ಹುಲಿ ವಾಪಸ್ ತೆರಳಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಇದೇ ಹಸುವನ್ನು ಈ ಪ್ರದೇಶದಲ್ಲಿ ಹುಲಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು. ಬಳಿಕ ಪಶುವೈದ್ಯಾಧಿಕಾರಿಗಳ ನಿರಂತರ ಚಿಕಿತ್ಸೆಯ ಫಲವಾಗಿ ಹಸು ಸಾವಿನ ಅಂಚಿನಿಂದ ಪಾರಾಗಿತ್ತು ಎಂದು ತೌಫಿಕ್ ತಿಳಿಸಿದ್ದಾರೆ. ಹುಲಿ ದಾಳಿಯ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದಾಗ ಸ್ಥಳಕ್ಕೆ ಬಂದು ಪರಿಶೀಲಿಸಿದ ವಿರಾಜಪೇಟೆ ಅರಣ್ಯ ಅಧಿಕಾರಿಗಳು, ಹುಲಿ ದಾಳಿಯಿಂದ ಗಾಯಗೊಂಡ ಹಸುವಿಗೆ ಸೂಕ್ತ ಪರಿಹಾರ ನೀಡಲು ಗಾಯದ ಪ್ರಮಾಣದ ಕುರಿತ ನಿರ್ದಿಷ್ಟ ಮಾನದಂಡವಿದೆ. ಈ ಗಾಯದ ಮಾನದಂಡದಲ್ಲಿ ಹಸುವಿನ ಮಾಲೀಕರಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಂಬಟ್ಟಿ ಗ್ರಾಮಸ್ಥರು, ಎರಡು ಬಾರಿ ಈ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಕಳೆದ ವರ್ಷವೂ ಹುಲಿ ದಾಳಿಯಿಂದಾಗಿ ಈ ಹಸು ತೀವ್ರವಾಗಿ ಗಾಯಗೊಂಡಿತ್ತು. ಬಳಿಕ ಚಿಕಿತ್ಸೆಯಿಂದಾಗಿ ಅದೃಷ್ಟವಶಾತ್ ಬದುಕುಳಿದಿದೆ. ಈ ಬಾರಿಯೂ ಗಂಭೀರ ಪ್ರಮಾಣದ ಗಾಯವಾಗಿರುತ್ತದೆ. ಈ ಗಾಯದ ನೋವಿನ ಪರಿಣಾಮ ಹಸು ಯಾವುದೇ ಆಹಾರವನ್ನು ಸೇವಿಸುತ್ತಿಲ್ಲ. ಅಲ್ಲದೆ ಬಲಗಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಸರಿಯಾಗಿ ಎದ್ದು ನಿಲ್ಲಲು ಸಾಧ್ಯವಾಗದೆ ನರಳಾಡುತ್ತಿದೆ. ದಾಳಿಯಿಂದಾಗಿ ಭಾರಿ ಪ್ರಮಾಣದ ಗಾಯವಾಗಿದ್ದರೂ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುವುದು ಅರಣ್ಯ ಇಲಾಖೆಯ ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ನಾಗರಿಕರಿಗೆ ಆತಂಕ:ಇದೀಗ ಅಂಬಟ್ಟಿ ಭಾಗದಲ್ಲಿ ನಿರಂತರವಾಗಿ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಹಗಲಿನಲ್ಲಿ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಈ ಪ್ರದೇಶದಿಂದ ಸಾಕಷ್ಟು ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ-ಕಾಲೇಜಿಗೆ ತೆರಳುತ್ತಿದ್ದು, ಅವರೆಲ್ಲರೂ ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಅಲ್ಲದೆ ರಾತ್ರಿ ಸಮಯದಲ್ಲಿ ಈ ಭಾಗದಲ್ಲಿ ಯಾವುದೇ ಬೀದಿ ದೀಪದ ವ್ಯವಸ್ಥೆ ಇಲ್ಲ. ಇದು ವಿವಿಧ ಕೆಲಸಗಳಿಗೆ ತೆರಳಿ ಸಂಜೆ ವೇಳೆ ಮನೆಗೆ ಮರಳುವ ಕಾರ್ಮಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಅದರಿಂದ ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಹುಲಿ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಹಸುವಿನ ಮಾಲೀಕರಿಗೆ ಕೂಡಲೆ ಸೂಕ್ತ ಪರಿಹಾರ ನೀಡಬೇಕು ಎಂದು ಅಂಬಟ್ಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.