ಹುಬ್ಬಳ್ಳಿ ಯುವತಿ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ

KannadaprabhaNewsNetwork | Published : Apr 20, 2024 1:02 AM

ಸಾರಾಂಶ

ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿ ನಡೆದ ವಿದ್ಯಾರ್ಥಿನಿ ನೇಹಾಳ ಭೀಕರ ಹತ್ಯೆ ಖಂಡನೀಯ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಆಗ್ರಹಿಸಿದ್ದಾರೆ.

ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲದೆ ಇರುವುದು ಈ ಘಟನೆಗಳಿಗೆ ಕಾರಣವಾಗಿವೆ. ಹುಬ್ಬಳ್ಳಿ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಕರ್ನಾಟಕ ಲಿಂಗಾಯತ ಶಿಕ್ಷಣ ತಾಂತ್ರಿಕ ವಿಶ್ವವಿದ್ಯಾನಿಲಯ (ಬಿವಿಬಿ) ಆವರಣದಲ್ಲಿ ಗುರುವಾರ ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ (24) ವಿದ್ಯಾರ್ಥಿನಿಯನ್ನು ಹಾಡಹಗಲೆ ತನ್ನ ಹಳೆಯ ಸಹಪಾಠಿ ಚಾಕುವಿನಿಂದ ಹತ್ಯೆಗೈದಿರುವುದು ಅತ್ಯಂತ ಖಂಡನೀಯ. ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕು.ಸರ್ಕಾರ ಇವುಗಳ ಬಗ್ಗೆ ಗಮನ ನೀಡದೆ ಇರುವುದರಿಂದ ಈ ಪ್ರಕರಣಗಳು ರಾಜ್ಯಾದ್ಯಂತ ಪ್ರತಿ ದಿನವೂ ನಡೆಯುತ್ತಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆದರೆ, ಇದನ್ನು ರಾಜ್ಯ ಸರ್ಕಾರ ಜಾರಿ ಮಾಡಿಲ್ಲ. ತಕ್ಷಣ ಜಾರಿ ಮಾಡಬೇಕು. ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಒಂದು ವೇಳೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸದಿದ್ದರೆ ಎಸ್‌ಎಫ್‌ಐ ನೇತೃತ್ವದಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಹುಬ್ಬಳ್ಳಿ ಘಟನೆ: ಎಬಿವಿಪಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಹಾವೇರಿ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ವಿದ್ಯಾರ್ಥಿನಿಯ ಕೊಲೆಯನ್ನು ಖಂಡಿಸಿ ಹಾಗೂ ಜಿಹಾದಿ ಮನಸ್ಥಿತಿಯ ಫಯಾಜನನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ವತಿಯಿಂದ ಶುಕ್ರವಾರ ನಗರದ ಜಿ.ಎಚ್. ಕಾಲೇಜಿನ ಎದುರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಹತ್ಯೆ ಖಂಡಿಸಿ ಉಪತಹಸೀಲ್ದಾರ್‌ ಮೂಲಕ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ, ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ ನವೀನ ಜಿ.ಕೆ., ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ, ಹಾವೇರಿ ಜಿಲ್ಲಾ ಸಂಪರ್ಕ ಪ್ರಮುಖರಾದ ಯಲ್ಲಪ್ಪಗೌಡ ಪಾಟೀಲ, ಕಿರಣ ಶೀಗಿಹಳ್ಳಿ, ಕಾರ್ತಿಕ ಬೊಮ್ಮನಹಳ್ಳಿ, ಯೋಗೀಶ್ ಈಟಿ ಇದ್ದರು.

Share this article