- ₹ 80ಲಕ್ಷ ವೆಚ್ಚದ ಗಾಳಿಹಳ್ಳಿ ಬಳಿ ಪಾದದ ಕೆರೆ ಕೋಡಿಗೆ ಮೇಲ್ಸೇತುವೆ ಕಾಮಗಾರಿಗೆ ಭೂಮಿಪೂಜೆ: ಶೀಘ್ರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿ
ಕನ್ನಡಪ್ರಭ ವಾರ್ತೆ, ಬೀರೂರು.ಜಗತ್ತಿನ ಎಲ್ಲಾ ದೇಶಗಳು ಗೌರವಿಸುವ, ಎಲ್ಲಾ ವರ್ಗದ ಜನರಿಗೂ ಮೀಸಲಾತಿ ನೀಡಿ ಹಿಂದುಳಿದ ವರ್ಗಗಳ ಆಶಾಕಿರಣ, ವಿಶ್ವಮಾನವರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಪಟ್ಟಣದ ಹೃದಯಭಾಗದಲ್ಲಿ ಶೀಘ್ರ ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಭಾನುವಾರ ಗಾಳಿಹಳ್ಳಿ ಪಕ್ಕದ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಪಾದದ ಕೆರೆಯ ಕೋಡಿ ಮೇಲ್ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. ಕಡೂರಿನಲ್ಲಿ ಉತ್ತಮವಾದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯಾಗಿದ್ದು, ಅದರಂತೆ ಬೀರೂರಲ್ಲಿ ಸ್ಥಾಪನೆ ಮಾಡಬೇಕೆಂದು ಇಲ್ಲಿನ ಜನರ ಒತ್ತಾಯವಾಗಿದೆ. ನನ್ನ ಅವಧಿಯಲ್ಲಿ ಅಂತಹ ಮಹಾನ್ ವ್ಯಕ್ತಿಯ ಪುತ್ಥಳಿ ಸ್ಥಾಪನೆ ಮಾಡುವುದು ನನಗು ಹೆಮ್ಮೆಯ ವಿಚಾರ. ಮಹಾತ್ಮ ಗಾಂಧಿ ವೃತ್ತದ ಪಕ್ಕದ ಪೊಲೀಸ್ ಚೌಕಿ ಬಳಿ ಪುರಸಭೆ ಜಾಗ ಮೀಸಲಿರಿಸಿದೆ. ಸರ್ಕಾರದ ಅನುದಾನವಾಗಲಿ ಅಥವಾ ನನ್ನ ವೈಯಕ್ತಿಕ ಅನುದಾನದಲ್ಲಿ ಶೀಘ್ರ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಯಾಗುವುದು ಖಚಿತ ಎಂದರು.ಇತಿಹಾಸ ಪ್ರಸಿದ್ಧ ಕಾರ್ಣಿಕದೊಡೆಯ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಶಕ್ತಿ ಏನೆಂದು ಚುನಾವಣಾ ಸಂದರ್ಭದಲ್ಲಿ ಅರಿವಿಗೆ ಬಂದಿದೆ. ನಾನು ಮತ್ತು ನಮ್ಮ ಹಾಸನ ಸಂಸದರು ಜಯಶೀಲರಾಗಲು ಸ್ವಾಮಿ ಕೃಪಕಟಾಕ್ಷವೇ ಕಾರಣ. ದೇವಾಲಯಕ್ಕೆ ಭೇಟಿ ನೀಡಿದ್ದ ಅನೇಕ ರಾಜಕಾರಣಿಗಳಾದ ಇಂದಿರಾಗಾಂಧಿ, ಜಗಜೀವನ್ ರಾಂ, ಮುನಿಯಪ್ಪರಿಂದ ಶ್ರೇಯಸ್ ಪಟೇಲ್ ವರೆಗೂ ಸ್ವಾಮಿ ವರಪ್ರಸಾದದಿಂದ ಸಂಸದರಾಗಿರುವುದು ನಮ್ಮೆಲ್ಲರ ಕಣ್ಣಮುಂದೆ ಇರುವ ವಿಚಾರ. ಅಂತಹ ಸ್ವಾಮಿ ಸೇವೆ ಸದಾ ಸಿದ್ದನಾಗಿದ್ದು ದೇವಾಲಯ ಮುಂಭಾಗಕ್ಕೆ ಛಾವಣಿಯನ್ನು ಶೀಘ್ರ ನಿರ್ಮಾಣ ಮಾಡಿಸಲಾಗುವುದು ಎಂದರು.ಕಳೆದ ರಾಜ್ಯ ಬಜೆಟ್ ನಲ್ಲಿ ₹ 407ಕೋಟಿ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದು, ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಜೊತೆಗೆ ಕ್ಷೇತ್ರದ 118 ಕೆರೆ ತುಂಬಿಸುವ ಕಾಮಗಾರಿಗಳು ಚಾಲನೆಯಲ್ಲಿದ್ದು 2027ರ ಅಂತ್ಯಕ್ಕೆ ಕಾಮಗಾರಿ ಪೂರ್ಣವಾಗಿ ಬರಮುಕ್ತಿಗೆ ಸಹಾಯವಾಗಲಿದೆ ಎಂದರು.ಇನ್ನು ಗೆದ್ಲೇಹಳ್ಳಿ ಬಳಿಯ ನಗಾದಿಯತ್ ಕಾವಲ್ ನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿರುವ ಪರಿಣಾಮ ಹಲವು ಗಾರ್ಮೇಂಟ್ಸ್ ಮತ್ತಿತರ ಸಣ್ಣ ಸಣ್ಣ ಕಂಪನಿಗಳು ಪ್ರಾರಂಭವಾದರೆ ಕ್ಷೇತ್ರದ ನಿರುದ್ಯೋಗ ಮಹಿಳೆ ಮತ್ತು ಪುರುಷರಿಗೆ ಉದ್ಯೋಗ ಲಬಿಸಿ ನಿರುದ್ಯೋಗ ನಿರ್ನಾಮವಾಗಲು ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದರು.ಶ್ರೀ ಮೈಲಾರಲಿಂಗೇಶ್ವರ ದೇವಾಲಯ ಟ್ರಸ್ಟ್ ಮತ್ತು ಮಾದಿಗ ಸಮಾಜದಿಂದ ಸಿದ್ಧಪಡಿಸಿದ್ದ ಭಿನ್ನಒತ್ತಳೆ ಓದಿದ ಬಿ.ಟಿ. ಚಂದ್ರಶೇಖರ್ ಮಾತನಾಡಿ, ಬಡಾವಣೆಯಲ್ಲಿ ಸುಮಾರು 3500 ಕುಟುಂಬಗಳಿದ್ದು ಒಂದೇ ಮನೆಯಲ್ಲಿ ಅನೇಕರು ವಾಸಿಸುತ್ತಿದ್ದಾರೆ. ಕೆಲವು ನಿರ್ಗತಿಕರಿಗೆ ನಿಮ್ಮ ಅವಧಿಯಲ್ಲಿ ಆಶ್ರಯನಿವೇಶನ ನೀಡಬೇಕು. ಜೊತೆಗೆ ಸದ್ಯ ಪುರಸಭೆ ಜಾಗದಲ್ಲಿ ಅನೇಕ ವರ್ಷಗಳಿಂದ ಸ್ವಾಧೀನದಲ್ಲಿದ್ದುಕೊಂಡು ಜೀವನ ನಡೆಸುತ್ತಿರುವ ಅನೇಕರಿಗೆ ಆಶ್ರಯ ಸಮಿತಿಯಿಂದ ಹಕ್ಕು ಪತ್ರ ನೀಡಬೇಕೆಂದು ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಶಾಸಕ ಆನಂದ್, ಖಾಸಗಿ ಮಾಲೀಕರು ಅಥವ ರೈತರಿಂದ ಈಗಿರುವ ಭೂಮಿಬೆಲೆಯಲ್ಲಿ ಖರೀದಿಸಲು ಸಾಧ್ಯವಿಲ್ಲ. ಹಾಗೇನಾದರೂ ಕಡಿಮೆ ಬೆಲೆಗೆ ಭೂಮಿ ಸಿಕ್ಕರೆ ಖಂಡಿತ 15 ಎಕರೆ ಖರೀದಿಸಿ ವಸತಿ ರಹಿತರಿಗೆ ನಿವೇಶನ ನೀಡಲು ಪ್ರಯತ್ನಿಸುತ್ತೇನೆ. ಹಿಂದುಳಿದವರ ಬೆನ್ನೆಲುಬಾಗಿ ನಮ್ಮ ಕಾಂಗ್ರೆಸ್ ಪಕ್ಷ ಸದಾ ನಿಲ್ಲುತ್ತದೆ ಎಂದರು.ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಎಲೆರವಿಕುಮಾರ್, ದೇವಾಲಯ ಸಮಿತಿ ಅಧ್ಯಕ್ಷ ವಿಶ್ವೇಶ್ವರಾಚಾರ್, ಗೌಡರಾದ ಬಿ.ಜಿ. ಮೈಲಾರಪ್ಪ, ಸಿ,ಶಿವಣ್ಣ, ಜಯಣ್ಣ, ದಕ್ಷಿಣಮೂರ್ತಿ, ಕುಮಾರಪ್ಪ, ತಾಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಹಾಲಪ್ಪ, ಸೋಮಣ್ಣ, ಮಾದಿಗ ಸಮಾಜದ ಮುಖಂಡ ಬಿ.ಎನ್.ಚೌಡಪ್ಪ, ಮಲ್ಲಿಕಾರ್ಜುನ್, ವಿನೋದ್, ಆರ್.ಎಂ.ಎಸ್, ನಾಗರಾಜ್ ಪೂಜಾರುಗಳಾದ ಧಶರಥ, ವಿಜೇತ ಸ್ವಾಮಿಗಳು, ಇಂಜಿನಿಯರ್ ಗಿರೀಶ್ ಸೇರಿದಂತೆ ನೂರಾರು ಭಕ್ತರು ಇದ್ದರು.
-- ಬಾಕ್ಸ್:-- ಇತಿಹಾಸ ಪ್ರಸಿದ್ಧ ಮೈಲಾರಸ್ವಾಮಿ ಪಾದ ನೆಲೆಯೂರಿದ ಈ ಸ್ಥಳ ಪುಣ್ಯ ಭೂಮಿ ಇದು. ಯಾವ ಶಾಸಕರಿಂದ ಮಾಡದ ಕೆಲಸವನ್ನು ಶಾಸಕ ಆನಂದ್ ಮಾಡುತ್ತಿರುವುದು ಶ್ಲಾಘನೀಯ ಮತ್ತು ಇಲ್ಲಿನ ಅಪಾರ ಭಕ್ತರಿಗೆ ಸಹಾಯಕವಾಗಲಿದೆ.- ಆನಂದ್.
ಜೋಡಿತಿಮ್ಮಾಪುರ ಗ್ರಾ.ಪಂ.ಅಧ್ಯಕ್ಷ.--23 ಬೀರೂರು 1ಬೀರೂರಿನ ಗಾಳಿಹಳ್ಳಿ ಪಕ್ಕದಲ್ಲಿರುವ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ಪಾದದ ಕೆರೆಯ ಕೋಡಿಗೆ ₹ 80ಲಕ್ಷದ ಮೇಲ್ಸೇತುವೆ ಕಾಮಗಾರಿಗೆ ಶಾಸಕ ಆನಂದ್ ಭೂಮಿಪೂಜೆ ನೇರವೇರಿಸಿದರು. ಶಶಿಧರ್, ಹಾಗೂ ಸರಸ್ವತಿಪುರಂ ಬಡಾವಣೆ ಗೌಡರು ಇದ್ದರು.