ಕಳಪೆ ಸಾಮಗ್ರಿ ಕಳುಹಿಸುತ್ತಿರುವುದರಿಂದ ಅನುಭವ ಮಂಟಪದಂತಹ ಚರ್ಚೆ ನಡೆಯುತ್ತಿಲ್ಲ

KannadaprabhaNewsNetwork | Published : Mar 24, 2025 12:34 AM

ಸಾರಾಂಶ

ಸ್ವಾತಂತ್ರ್ಯ ಚಳವಳಿಯ ಮಾದರಿಯಲ್ಲಿ ಮತ್ತೆ ಶರಣ ಸಾಹಿತ್ಯ ಚಳವಳಿ ನಡೆಯಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ಸಂಸತ್, ಶಾಸನ ಸಭೆಗಳಿಗೆ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಕಳುಹಿಸುತ್ತಿದ್ದೇವೆ. ಹೀಗಾಗಿ, ಅನುಭವ ಮಂಟಪದಂತಹ ಚರ್ಚೆಗಳು ನಡೆಯುತ್ತಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಷಾದಿಸಿದರು.

ನಗರದ ಕಲಾಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಹಾಗೂ ನಗರ ಘಟಕವು ಭಾನುವಾರ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಂಸತ್ ಹಾಗೂ ರಾಜ್ಯದ ಶಾಸನಸಭೆಯನ್ನು 12ನೇ ಶತಮಾನದ ಅನುಭವ ಮಂಟಪಕ್ಕೆ ಹೋಲಿಕೆ ಮಾಡುತ್ತಾರೆ. ಅನುಭವ ಮಂಟಪದ ಪ್ರೇರಣೆಯಿಂದಲೇ ಶಾಸನ ಸಭೆಗಳು ರೂಪುಗೊಂಡಿವೆ ಎನ್ನುತ್ತಾರೆ. ಆದರೆ, ಈಗ ಸಂಸತ್ ಹಾಗೂ ಶಾಸನ ಸಭೆಯಲ್ಲಿ ಅಂತಹ ಚರ್ಚೆಗಳು ಆಗುತ್ತಿಲ್ಲ ಎಂದರು.

ಅನುಭವ ಮಂಟಪದಲ್ಲಿ ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ, ಅಲ್ಲಮನಂತಹವರು ಈಗಿನ ಸಂಸತ್, ಶಾಸನಸಭೆಗಳಲ್ಲಿ ಅಂತಹ ಪ್ರತಿಭಾವಂತರು ಇಲ್ಲ. ಹಿಂದಿನ ದಶಕಗಳಲ್ಲಿ ಅಂತಹ ರಾಜಕಾರಣಿಗಳು, ರಾಜಕೀಯ ನಾಯಕರು ಇದ್ದರು. ಆದರೆ, ಈಗ ಅಂತಹವರನ್ನು ಕಾಣುತ್ತಿಲ್ಲ. ಮೌಲ್ಯ ಕುಸಿಯುತ್ತಿದೆ. ಸಾಂಸ್ಕೃತಿಕ ದಿವಾಳಿತನವನ್ನು ಕಾಣುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮತ್ತೊಮ್ಮೆ ಶರಣ ಸಾಹಿತ್ಯ ಚಳವಳಿ

ನಾಡಿನಲ್ಲಿ ಸುಖೀ ರಾಜ್ಯದ ಕಲ್ಪನೆಯ ಸಾಕರ, ಸಮ ಸಮಾಜ ನಿರ್ಮಾಣ, ಮಾನವೀಯತೆಯ ವಾತಾವರಣ ಸೃಷ್ಟಿಯಾಗಬೇಕಾದರೆ ಸ್ವಾತಂತ್ರ್ಯ ಚಳವಳಿಯ ಮಾದರಿಯಲ್ಲಿ ಶರಣ ಸಾಹಿತ್ಯ ಚಳವಳಿ ನಡೆಯಬೇಕು. ಏಕೆಂದರೇ ಶರಣರು ಜಾತಿ ವ್ಯವಸ್ಥೆಯ ವಿರುದ್ಧವಾಗಿದ್ದರು. ಕಾಯಕ ತತ್ವವನ್ನು ಬೋಧಿಸಿದ್ದರು. ಮಹಿಳಾ ಸಮಾನತೆಯನ್ನು ಸಾರಿದ್ದರು. ಆದ್ದರಿಂದ ಶರಣ ಸಾಹಿತ್ಯ ಚಳವಳಿಯನ್ನು ಮತ್ತೆ ಶುರು ಮಾಡಬೇಕು ಎಂದು ಅವರು ಆಶಿಸಿದರು.

ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ಇಂತಹ ಚಳವಳಿಯನ್ನು ಸಮಾಜ ಕಲ್ಯಾಣ ಇಲಾಖೆ ಸಹಕಾರದಿಂದಲೇ ರೂಪುಗೊಳಿಸುತ್ತೇವೆ ಎನ್ನುವುದಾದರೆ ಅದಕ್ಕೆ ತಾವು ಸದಾ ಕಾಲವೂ ಸಹಕಾರ ನೀಡುತ್ತೇವೆ. ಇತ್ತೀಚಗೆ ನಡೆದ ಸಂವಿಧಾನ ಜಾಗೃತಿ ಮಾನವ ಸರಪಳಿ ಕಾರ್ಯಕ್ರಮವ ವಿಶ್ವದೆಲ್ಲೆಡೆ ಗಮನ ಸೆಳೆದಿದೆ. ಬಳಿಕ ಎಲ್ಲರಲ್ಲೂ ಸಂವಿಧಾನದ ಬಗ್ಗೆ ಅರಿವು ಉಂಟಾಗಿದೆ. ಇದೇ ಮಾದರಿಯಲ್ಲಿ ಶರಣ ಸಾಹಿತ್ಯ ಚಳವಳಿಯನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ರಸ್ತುತ ಬಸವಣ್ಣ ಹೇಳಿದ ಕಾಯಕ ತತ್ವ ಕಾಣುತ್ತಿಲ್ಲ. ಜಾತಿ ಶ್ರೇಷ್ಠತೆಯಿಂದ ಹೊರ ಬರಬೇಕಿದೆ. ಸ್ವಾತಂತ್ರ್ಯ ಚಳವಳಿಗಿಂತ ಶಕ್ತಿಯುತವಾದ ಶರಣ ಸಾಹಿತ್ಯ ಚಳವಳಿಯನ್ನು ಹಳ್ಳಿ ಹಳ್ಳಿಗಳಲ್ಲಿ ಹುಟ್ಟು ಹಾಕಬೇಕಿದೆ ಎಂದು ಅವರು ತಿಳಿಸಿದರು.

----

ಕೋಟ್...

ಬಸವಣ್ಣ, ಶರಣರ ಸಾಹಿತ್ಯ ಚಳವಳಿಯು ಯಾರ ಸ್ವತ್ತಲ್ಲ. ಅದು ಮಾನವರ ಸ್ವತ್ತು. ದೇಶದ ಸ್ವತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶರಣ ಸಾಹಿತ್ಯವು ಎಲ್ಲರಿಗೂ ಪ್ರೇರಣೆಯಾಗಬೇಕು.

- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು

Share this article