ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುಡಿಬಂಡೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು. ಅಂಬೇಡ್ಕರ್ ರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿ, 12 ಗಂಟೆಗಳ ಹೋರಾಟದಲ್ಲಿ 22 ಜನ ಹುತಾತ್ಮರಾದರು. ಅಂಬೇಡ್ಕರ್ ಅವರು ಈ ಯುದ್ಧವನ್ನು ಸ್ವದೇಶಿ ಗುಲಾಮಗಿರಿ ವಿರುದ್ಧ ಸ್ವಾಭಿಮಾನದ ಯುದ್ಧ ಎಂದು ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಈ ಹೋರಾಟದಲ್ಲಿ ಮಡಿದಂತಹ ವೀರ ಸೈನಿಕರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.ಬಳಿಕ ದಲಿತ ಸಂಘರ್ಷ ಸಮಿತಿಯ ಮುಖಂಡ ಚೆಂಡೂರು ರಮಣ ಮಾತನಾಡಿ, ದೇಶದಾದ್ಯಂತ ಇಂದು ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಸ್ವಾಭಿಮಾನಕ್ಕಾಗಿ, ಗೌರವವಕ್ಕಾಗಿ ಈ ಹೋರಾಟ ನಡೆದಿತ್ತು. ಸಂವಿಧಾನ ರಚನೆಯ ಪೂರ್ವದಲ್ಲಿ ನಡೆದಿರುವ ಇಂಥ ಹೋರಾಟಗಳೇ ಉತ್ತಮ ಸಂವಿಧಾನ ನಿರ್ಮಾಣವಾಗಲು, ಜನರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಅಸ್ಪೃಶ್ಯರೆಂದು ಗುರುತಿಸಿಕೊಂಡ ಜನರು ಈ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪೇಶ್ವೆಗಳ ಜಾತೀಯತೆಯ ವಿರುದ್ಧ ಪಡೆದ ಗೆಲುವಾಗಿ ಕೋರೆಗಾಂವ್ ವಿಜಯ ದಿನವನ್ನು ಆಚರಿಸಲಾಗುತ್ತದೆ. ಕೇವಲ ಭಾರತೀಯರು ಮಾತ್ರವಲ್ಲದೇ ಬ್ರಿಟಿಷರು ಸಹ ಈ ವಿಜಯೋತ್ಸವದಲ್ಲಿ ಮಡಿದಂತಹ ನಾಯಕರಿಗೆ ಗೌರವ ನಮನ ಸಲ್ಲಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕೋರೆಗಾಂವ್ ಯುದ್ಧದಲ್ಲಿ ಜಯಗಳಿಸಿದ ವೀರ ಸೇನಾನಿಗಳನ್ನು ನೆನಪಿಸುವಂತಹ ಗೀತೆಯನ್ನು ಹಾಡಲಾಯಿತು. ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಚೆನ್ನರಾಯಪ್ಪ, ರಾಜು, ಚಿಕ್ಕನರಸಿಂಹಪ್ಪ, ನರಸಿಂಹಪ್ಪ, ರಾಮಾಂಜಿ, ರವಿ, ಸುಬ್ಬರಾಯಪ್ಪ ಸೇರಿ ಹಲವರು ಇದ್ದರು.