ಕನ್ನಡಪ್ರಭ ವಾರ್ತೆ ತುಮಕೂರುದಲಿತ ಮತ್ತು ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಪ್ರಾಮಾಣಿಕ ಹೋರಾಟಗಾರರ ಜೀವನ ಚಿರಿತ್ರೆಗಳನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಕಟಿಸುವ ಮೂಲಕ, ಭವಿಷ್ಯದ ಚಳವಳಿಗಾರರಿಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಪ್ರೊ.ಕಾಳೇಗೌಡ ನಾಗವಾರ ತಿಳಿಸಿದ್ದಾರೆ.ನಗರದ ಗ್ರಂಥಾಲಯ ಸಭಾಂಗಣದಲ್ಲಿ ದಲಿತ ಹೋರಾಟಗಾರ ಬೆಲ್ಲದಮಡು ರಂಗಸ್ವಾಮಿ ಅವರ ಕುರಿತ “ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು” ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ದಸಂಸ ಹೋರಾಟಗಾರ ಬೆಲ್ಲದಮಡು ರಂಗಸ್ವಾಮಿಯವರ ಬದ್ದತೆ ಮತ್ತು ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿವೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದವರನ್ನು ಯುವ ಜನತೆಗೆ ಪರಿಚಯಿಸುವ ಮೂಲಕ ವಾಸ್ತವಕ್ಕೆ ಹತ್ತಿರವಾದ ಹೋರಾಟವನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು.ಲೋಹಿಯಾ ಮತ್ತು ಅಂಬೇಡ್ಕರ್ ಈ ಭರತ ಖಂಡದ ಇಂಚು ಬಲ್ಲವರಾಗಿದ್ದರೂ, ಆದರೂ ದಲಿತರ ಬದುಕು ಕುರಿತು ಲೋಹಿಯಾಗಿಂತ ಅಂಬೇಡ್ಕರ್ ಹೆಚ್ಚು ಅರಿತಿದ್ದರು. ಜ್ಞಾನಕ್ಕಿಂತಲೂ ಮಿಗಿಲು ಬೇರಿಲ್ಲ ಎಂಬುದ ಅರಿತಿದ್ದ ಅಂಬೇಡ್ಕರ್ ಜ್ಞಾನ ಸಂಪಾದನೆಯ ಜೊತೆಗೆ, ಸಮುದಾಯದ ಸಾಮಾಜಿಕ ಸಮಾನತೆಗಾಗಿ ಸಂಸಾರವನ್ನು ಮರೆತರು, ಆದರೆ ರಂಗಸ್ವಾಮಿ ಬೆಲ್ಲದಮಡು ಅವರು, ಚಳವಳಿಯ ಜೊತೆಗೆ, ಮನೆಯ ಹಿರಿಯನಾಗಿ ತಮ್ಮಂದಿರು, ತಂಗಿಯನ್ನು ಓದಿಸಿ, ಮದುವೆ ಮಾಡಿ ಹಿರಿಯರ ಜವಾಬ್ದಾರಿ ನಿರ್ವಹಿಸಿದರು ಎಂದು ಪ್ರೊ.ಕಾಳೇಗೌಡ ನಾಗಾವರ ತಿಳಿಸಿದರು.ಸಂಬಂಧವೆಂಬುದು ಕೇವಲ ರಕ್ತ ಹಂಚಿಕೊಂಡು ಹುಟ್ಟಿದವರಿಗೆ ಸೀಮಿತವಲ್ಲ. ಸಕಲ ಮನುಕುಲಕ್ಕೂ ಸೇರಿದ್ದು, ಆದಿದೇವ ಎಂದು ಕರೆಯುವ ಶಿವ ಅರ್ಧನಾರೀಶ್ವರನಾಗುವ ಮೂಲಕ ಹೆಣ್ಣು, ಗಂಡು ಎರಡು ಮುಖ್ಯ ಎಂಬುದನ್ನು ತೋರಿಸಿದ್ದಾನೆ.ನಂದಿಯನ್ನು ವಾಹನವಾಗಿಸಿಕೊಂಡು ಸಕಲ ಜೀವರಾಶಿಗಳು ಅಗತ್ಯ ಎಂಬುದನ್ನು ಸಾರಿದ್ದಾನೆ.ಹಾಗಾಗಿಯೇ ಎಲ್ಲರದಲ್ಲಿಯೂ ಒಳ್ಳೆಯದನ್ನು ಬಯಸುವ ರೀತಿ ನಡೆದುಕೊಳ್ಳುವ ಮಾದರಿ ಬದುಕು ನಮ್ಮದಾಗಲಿ ಎಂದು ಪ್ರೊ.ಕಾಳೇಗೌಡ ನಾಗಾವರ ನುಡಿದರು.
ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿದ್ದ ದಿನಗಳಿಂದಲೂ ನನಗೆ ರಂಗಸ್ವಾಮಿ ಬೆಲ್ಲದಮಡು ಪರಿಚಿತರು. ನಾನು ಕಷ್ಟಕಾಲದಲ್ಲಿದ್ದಾಗ ಅನ್ನ ನೀಡಿದವರು. ಅವರ ಹೆಸರಿನ ಈ ಪುಸ್ತಕ ಅವರ ಬದುಕಿನ ಬಾವುಕ ರೂಪಕವಾಗಿದೆ. ಬಹುತೇಕ ಲೇಖಕರು ತಮ್ಮ ಹೃದಯದ ಮಾತುಗಳನ್ನಾಡಿದ್ದಾರೆ ಎಂದರು.ರಂಗಸ್ವಾಮಿ ಬೆಲ್ಲದಮಡು ಅವರು ತಮ್ಮ ಬದುಕಿನುದ್ದಕ್ಕೂ ಸಿದ್ದಾಂತಗಳ ಜೊತೆಗೆ, ಮನುಷ್ಯ ಸಂಬಂಧಗಳನ್ನು ಉಳಿಸಿಕೊಂಡು ಬಂದವರು. ಓರ್ವ ಹೋರಾಟಗಾರನಿಗೆ ಪ್ರಾಮಾಣಿಕತೆ ಮತ್ತು ಬದ್ದತೆ ಅತಿ ಮುಖ್ಯ. ಆತ ಮಾತ್ರ ಜನನಾಯಕನಾಗಿ ಜನರ ನಡುವೆ ಉಳಿಯಲು ಸಾಧ್ಯ ಎಂಬುದಕ್ಕೆ ತೋರಿಸಿದವರು.ಸಂಸಾರ ಮತ್ತು ಸಮಾಜ ಎರಡನ್ನು ಸರಿದೂಗಿಸಿದವರು.ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹಿಳಾ ಸಂಚಾಲಕಿಯನ್ನು ನೇಮಿಸಿದ ಕೀರ್ತಿ ಅವರದ್ದು ಎಂದರು.ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ದಸಂಸ ಹುಟ್ಟಿದಾಗ ಇದ್ದ ಬದ್ದತೆ ಇಂದು ಕಾಣದಾಗಿದೆ. ದಸಂಸ ಕಾರ್ಯಕರ್ತರೆಲ್ಲರೂ ಪ್ರಗತಿಪರರಾಗಿರಬೇಕು ಎಂಬ ನಿಯಮವಿತ್ತು. ಉದ್ಯೋಗದಲ್ಲಿ ಇದ್ದವರೆ ದಸಂಸವನ್ನು ಕಟ್ಟಿ ಪ್ರಾಮಾಣಿಕವಾಗಿ ಕೆಲಸ ಆರಂಭಿಸಿದ್ದರು. ಬೆಲ್ಲದಮಡು ರಂಗಸ್ವಾಮಿ ಅವರು ಉದ್ಯೋಗಸ್ಥರಾಗಿ, ಚಳವಳಿಗಾರರಾಗಿ, ಪಂಚಮ ಪತ್ರಿಕೆಯ ಹಂಚಿಕೆದಾರರಾಗಿ ಕೆಲಸ ಮಾಡುತ್ತಲೇ ಸಂಘಟನೆಯ ಕಾರ್ಯಕರ್ತರ ಕಷ್ಟ, ಸುಖಃಗಳನ್ನು ಅರ್ಥ ಮಾಡಿಕೊಳ್ಳುವ ತಾಯ್ತನ ಹೃದಯ ಹೊಂದಿದ್ದರು ಎಂದರು.ದಸಂಸ ಹೋರಾಟಗಾರ ಕೋಲಾರ ವೆಂಕಟೇಶ ಮಾತನಾಡಿ, ದಸಂಸ ಮುಂದೆ ಇಂದು ಬ್ರಾಹ್ಮೀಣಿಕರ ಮತ್ತು ಬಂಡವಾಳಶಾಹಿ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಳಮೀಸಲಾತಿಗಾಗಿ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಹೋರಾಟ ಅಗತ್ಯವೆಂದರು.ಕರ್ಮಯೋಗಿ ರಂಗಸ್ವಾಮಿ ಬೆಲ್ಲದ ಮಡು ನೆನಪಿನ ಸಂಪುಟದ ಸಂಪಾದಕ ಎಚ್.ವಿ.ವೆಂಕಟಾಚಲ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೊ.ಕೆ.ದೊರೆರಾಜು ವಹಿಸಿದ್ದರು. ಪ್ರಾಸ್ತಾವಿಕವಾಗಿ ಡಾ.ಮುರುಳೀಧರ ಬೆಲ್ಲದಮಡು ಮಾತನಾಡಿದರು. ವೇದಿಕೆಯಲ್ಲಿ ಡಾ.ಪಾವನ, ಡಾ.ಶಿವಣ್ಣ ತಿಮ್ಮಲಾಪುರ, ದಸಂಸದ ಮುಖಂಡರಾದ ನರಸಿಂಹಯ್ಯ,ನರಸಿಂಹಮೂರ್ತಿ,ಕೃಷ್ಣಪ್ಪ ಬೆಲ್ಲದಮಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಜಾನಪದ ಹಾಡುಗಾರ ಪಿಚ್ಚಳ್ಳಿ ಶ್ರೀನಿವಾಸ್ ಹಾಡುಗಳನ್ನು ಹಾಡಿದರು.