ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ದೇಶದ ನಾಗರಿಕರು ಗಟ್ಟಿ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಬದುಕುತ್ತಿದ್ದೇವೆಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಬಲಿಷ್ಠ ಸಂವಿಧಾನವೇ ಕಾರಣ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಬಣ್ಣಿಸಿದರು.ನಗರದ ಶತಮಾನೋತ್ಸವ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ೧೩೪ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥ ಸಂವಿಧಾನ. ಮಹತ್ತರ ಕೊಡುಗೆ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರತಿನಿತ್ಯ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಅಂಬೇಡ್ಕರ್ ಜಾತಿ ಅಥವಾ ಧರ್ಮಕ್ಕೆ ಮೀಸವಲ್ಲ. ಅವರು ಎಲ್ಲ ಭಾರತೀಯರ ಪಾಲಿನ ಆದರ್ಶ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಅಂಬೇಡ್ಕರ್ ವಿಚಾರಧಾರೆ, ಸಂವಿಧಾನ ಕುರಿತು ಜನರಿಗೆ, ವಿದ್ಯಾರ್ಥಿಗಳಿಗೆ ಪ್ರಚುರಪಡಿಸುತ್ತಿದೆ. ನಾವೆಲ್ಲರೂ ಸಂವಿಧಾನದ ಆಶಯದಂತೆ ನಡೆಯಬೇಕು ಎಂದು ಸಲಹೆ ನೀಡಿದರು.ರಾಜಕಾರಣಿಗಳು, ಅಧಿಕಾರಿಗಳು ಸಂವಿಧಾನದ ಅಡಿಯಲ್ಲೇ ಕಾರ್ಯನಿರ್ವಹಿಸಬೇಕಿದೆ. ಎಲ್ಲರಿಗೂ ಸಮನಾದ ಕಾನೂನು ರಚಿಸಿದ್ದಾರೆ. ಸಾಕಷ್ಟು ಏಳು-ಬೀಳುಗಳ ನಡುವೆ ಇಂದು ತುಳಿತಕ್ಕೆ ಒಳಗಾದ ಸಮಾಜಕ್ಕೆ ಗೌರವವಾದ ಬದುಕುವ ಹಕ್ಕು ನೀಡಿದ್ದಾರೆ. ದೇಶದ ಜನಸಂಖ್ಯೆ ೧೪೦ ಕೋಟಿ ದಾಟಿದ್ದರೂ ಎಲ್ಲರಿಗೂ ಸಮನಾದ ಹಕ್ಕು ದೊರೆಯಲು ಸಂವಿಧಾನವೇ ಕಾರಣ ಎಂದರು.
ಸಹ ಪ್ರಾಧ್ಯಾಪಕ ಬೀರಯ್ಯ ಮಾತನಾಡಿ, ಬಾಬಾಸಾಹೇಬರು ಎಲ್ಲರಿಗೂ ಮತದಾನದ ಹಕ್ಕು ಸಿಗಬೇಕು ಎಂದು ಪ್ರತಿಪಾದಿಸಿದರು. ಇದೇ ವೇಳೆ ಅವರು ಅಂಬೇಡ್ಕರ್ ರಚಿತ ಸಂವಿಧಾನದ ತತ್ವಾದರ್ಶಗಳು, ವಿಚಾರಧಾರೆಗಳ ಕುರಿತು ಮಾಹಿತಿ ನೀಡಿದರು.ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯಾಧಿಕ ಅಂಕಗಳನ್ನು ಪಡೆದ ದಲಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಅಕ್ಕೂರು ಶೇಖರ್, ತಾಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ತಹಸೀಲ್ದಾರ್ ನರಸಿಂಹಮೂರ್ತಿ, ಪೌರಾಯುಕ್ತ ಮಹೇಂದ್ರ, ಇಒ ಸಂದೀಪ್ ಇತರರಿದ್ದರು.