ಡಾ. ಬಿ.ಆರ್. ಅಂಬೇಡ್ಕರ್ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ : ಎಚ್.ಡಿ.ತಮ್ಮಯ್ಯ

KannadaprabhaNewsNetwork | Published : Apr 15, 2025 12:45 AM

ಸಾರಾಂಶ

ಚಿಕ್ಕಮಗಳೂರು, ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮ ಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ. ಅವರು ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯ ಪಟ್ಟರು.

ಚಿಕ್ಕಮಗಳೂರಿನ ಕಲಾಮಂದಿರದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ರವರ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮ ಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ. ಅವರು ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯ ಪಟ್ಟರು.

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ ಅವರ 134 ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ಮನುಕುಲದ ಉಳಿವಿಗೆ ಹಾಗೂ ದೇಶದ ಪ್ರಗತಿಗೆ ಆಧಾರ ಸ್ಥಂಭಗಳಾಗಿವೆ. ಅವರು ವಿಶ್ವದ ಮಹಾನ್ ಸಂಶೋಧಕರು, ದೇಶದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಸುಧಾರಣೆಗಳನ್ನು ಆವಿಷ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನ ರಚಿಸಿದ್ದಾರೆ. ಅವರ ಮೌಲ್ಯಯುತ ಚಿಂತನೆ ಮತ್ತು ಸಾಧನೆಯನ್ನು ಯುವ ಜನಾಂಗ ಸ್ಮರಿಸಿಕೊಂಡು ಹೊಸತನದ ಸಮಾಜಕ್ಕೆ ಸ್ವತಂತ್ರ ಮನಸ್ಸಿನಿಂದ ತೆರೆದುಕೊಳ್ಳಬೇಕಿದೆ ಎಂದರು.

ಸಮಾನತೆ ಸಂದೇಶ ಸಾರಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಅಧ್ಯಯನದ ಶಿಸ್ತು, ಕಾರ್ಯಬದ್ಧತೆ ಮತ್ತು ಕರ್ತವ್ಯ ಪ್ರಜ್ಞೆ ಮೂಲಕ ಇಡೀ ಜಗತ್ತನ್ನೇ ಬೆಳಗಿದರು. ಸಮಾಜದ ಎಲ್ಲಾ ವರ್ಗಗಳ ಬದಲಾವಣೆಗೆ ಬೆಳಕು ತೋರಿದರು. ಅವರು ಕೌಟುಂಬಿಕ ಬದುಕಿಗೆ ಆದ್ಯತೆ ನೀಡದೆ ಶೋಷಿತ ಹಾಗೂ ದುರ್ಬಲರ ಪರವಾಗಿ ದಿಟ್ಟತನದಿಂದ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ತ್ವ ಸಿದ್ದಾಂತವನ್ನು ಜೀವನ ದಲ್ಲಿ ಅಳವಡಿಸಿಕೊಂಡು ಅವರು ದೇಶಕ್ಕೆ ನೀಡಿದ ಸಂವಿಧಾನದ ಆಶಯಕ್ಕೆ ಚ್ಯುತಿಯಾಗದಂತೆ ಪ್ರತಿಯೊಬ್ಬರೂ ಅದನ್ನು ಉಳಿಸುವ ಪ್ರಯತ್ನ ಮಾಡಿದಾಗ ಅಂಬೇಡ್ಕರ್ ಜಯಂತಿಗೆ ಅರ್ಥ ದೊರೆಯುತ್ತದೆ ಎಂದು ಹೇಳಿದರು.

ಒಂದು ಧರ್ಮವೇ ಅತ್ಯುನ್ನತ, ಅದರ ಸಾರವೇ ಶ್ರೇಷ್ಠ ಎನ್ನುವವರು ಕೋಮುವಾದಿಗಳು. ಇನ್ನೊಂದು ಧರ್ಮವನ್ನು ಸಹ ಪ್ರೀತಿ ವಿಶ್ವಾಸದಿಂದ ಕಂಡಾಗ, ಸಂವಿಧಾನದ ಆಶಯದಂತೆ ಸರ್ವಧರ್ಮ ಭಾವೈಕ್ಯತೆ ಸಂದೇಶ ಪಸರಿಸಬಹುದು ಅಂಬೇಡ್ಕರ್ ತಮ್ಮ ಮನಸ್ಸಿನ ಮೇಲಾದ ಗಾಯಕ್ಕೆ ಪ್ರತಿಯಾಗಿ ಸೆಟೆದು ನಿಂತು, ಶಿಕ್ಷಣದ ಕ್ರಾಂತಿ ಹುಟ್ಟು ಹಾಕಿದರು. ಹಾಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕದಿದ್ದರೆ, ಅಸ್ಪೃಶ್ಯತೆ ಹಾಗೂ ಅಸಮಾನತೆ ಸಮಾಜದಿಂದ ನಿರ್ಮೂಲನೆ ಯಾಗುವುದಿಲ್ಲ ಎಂದು ಹೇಳಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಉಪನ್ಯಾಸ ನೀಡಿ, ಡಾ. ಬಿ. ಆರ್. ಅಂಬೇಡ್ಕರ್‌ ಭಾರತ ಭವ್ಯ ಭಾಗ್ಯದ ನೇತಾರರು. ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ. ಹೆಸರಿಗೆ ಮಾತ್ರ ಮಹಾರಾಷ್ಟ್ರದವರು. ಆದರೆ ಅಕ್ಷರಶಃ ಅವರು ಭಾರತದ ಮನೆ ಮನೆಯ ಬೆಳಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಅಂಬೇಡ್ಕರ್ ಆದರ್ಶ ವ್ಯಕ್ತಿತ್ವ ಮತ್ತು ಜ್ಞಾನವನ್ನು ಇಡೀ ಜಗತ್ತು ಸ್ಮರಿಸಿ ಗೌರವಿಸುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಮಸ್ಯೆ ಗಳನ್ನು ವೈಜ್ಞಾನಿಕ ಚಿಂತನೆಗಳ ಮೂಲಕ ಸರಳೀಕರಿಸಿ ಸುಧಾರಣೆ ಮಾಡಿದ ಮೇಧಾವಿ ಎನಿಸಿಕೊಂಡಿದ್ದಾರೆ. ಅವರ ಮಾನವೀಯತೆ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಇಂದಿಗೂ ಪ್ರಸ್ತುತ. ಯುವ ಜನಾಂಗ ಅವರ ಚಿಂತನೆ ಗಳ ಅಧ್ಯಯನದಿಂದ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್ ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಪ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಹಾಗೂ ದಲಿತ ಸಂಘದ ಮುಖಂಡರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಪಂ ಆವರಣದ ಡಾ.ಬಿ ಆರ್ ಅಂಬೇಡ್ಕರ್ ಪುತ್ಥಳಿಗೆಗೆ ಗಣ್ಯರಿಂದ ಮಾಲಾರ್ಪಣೆ ನಡೆಯಿತು. ನಂತರ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದ ವರೆಗೆ ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು.13 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸೇರಿದಂತೆ ಗಣ್ಯರು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

Share this article