ಉಡುಪಿ ಕೃಷ್ಣಮಠ ಸರ್ವಜ್ಞಪೀಠಕ್ಕೆ ಸುವರ್ಣ ಕವಚ ಅರ್ಪಣೆ

KannadaprabhaNewsNetwork |  
Published : Apr 15, 2025, 12:45 AM IST
14ಕವಚ | Kannada Prabha

ಸಾರಾಂಶ

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಸಂನ್ಯಾಸಾಶ್ರಮದ ಸುವರ್ಣ ಮಹೋತ್ಸವದ ಅಂಗವಾಗಿ, ಕೃಷ್ಣಮಠದ ಸರ್ವಜ್ಞ ಪೀಠಕ್ಕೆ ರಚಿಸಿರುವ ಸುವರ್ಣ ಕವಚವನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮೂಲಕ ಅರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸೌರ ಯುಗಾದಿಯ ಪರ್ವ ದಿನದಂದು ಸೋಮವಾರ, ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಸಂನ್ಯಾಸಾಶ್ರಮದ ಸುವರ್ಣ ಮಹೋತ್ಸವದ ಅಂಗವಾಗಿ, ಕೃಷ್ಣಮಠದ ಸರ್ವಜ್ಞ ಪೀಠಕ್ಕೆ ರಚಿಸಿರುವ ಸುವರ್ಣ ಕವಚವನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮೂಲಕ ಅರ್ಪಣೆ ಮಾಡಿದರು.

ನಂತರ ಸಂದೇಶ ನೀಡಿದ ಪರ್ಯಾಯ ಪೀಠಾಧೀಶರು, ಸಾಕ್ಷಾತ್ ವಾಯು ದೇವರು, ವಾದಿರಾಜ ಸ್ವಾಮಿಯವರು ಮತ್ತು ಅಷ್ಟಮಠದ ನೂರಾರು ಯತಿಗಳು ಕುಳಿತ, ಪ್ರಣವ ಮಂತ್ರ ಜಪ ಮಾಡಿದ, ಸರ್ವಮೂಲಾದಿ ಗ್ರಂಥಗಳನ್ನು ಅಧ್ಯಯನ ಮಾಡಿದ ಏಕೈಕ ಸ್ಥಳವೆಂದರೇ ಅದು ಈ ಅತ್ಯಂತ ಪವಿತ್ರವಾದ ಸರ್ವಜ್ಞ ಪೀಠ. ಈ ಸ್ಥಳಕ್ಕೆ ಸದೃಶವಾದ ಇನ್ನೊಂದು ಸ್ಥಳ ಇಲ್ಲ. ಭಕ್ತರಿಗೆ ಇದರ ಮಹತ್ವ ತಿಳಿಸಲಿಕ್ಕಾಗಿಯೇ ಈ ಸುವರ್ಣ ಕವಚ ಸಮರ್ಪಣೆ ಮಾಡಲಾಗಿದೆ ಎಂದರು.

ಇಂದು ಚೈತ್ರ ಮಾಸದ ಕೃಷ್ಣ ಪಕ್ಷ ಬಿದಿಗೆ, ನಮಗೆ ಸನ್ಯಾಸಾಶ್ರಮ ಆದ ದಿವಸವೂ ಹೌದು, ಜೊತೆಗೆ ಯುಗಾದಿಯೂ ಬಂದಿದೆ. ಆಶ್ರಮವಾದ ಸುವರ್ಣೋತ್ಸವದ ಸಂದರ್ಭದಲ್ಲಿ ಸರ್ವಜ್ಞ ಪೀಠಕ್ಕೆ ಸುವರ್ಣ ಕವಚವನ್ನು ವಿಶ್ವವಸು ಸಂವತ್ಸರದ ಮೊದಲ ದಿನ ವಿಶ್ವಪ್ರಿಯ ತೀರ್ಥರಿಂದ ಅರ್ಪಿಸುತಿದ್ದೇವೆ ಎಂದರು.

ಶ್ರೀ ವಿ‍ಶ್ವಪ್ರಿಯ ತೀರ್ಥರು ಆಶೀರ್ವಚನ ನೀಡಿ, ಇಷ್ಟು ದಿವಸ ಉಡುಪಿ ರಜತ ಪೀಠಪುರ ಆಗಿತ್ತು, ಇಂದಿನಿಂದ ಸುವರ್ಣ ಪೀಠಪುರ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಮುಂದೆ ಇಲ್ಲಿ ಪೀಠಾರೋಹಣ ಮಾಡುವ ಪ್ರತಿಯೊಬ್ಬ ಸ್ವಾಮೀಜಿಯೂ ಸು-ವರ್ಣಗಳನ್ನೇ ಆಡುವಂತಹ ಒಂದು ದೊಡ್ಡ ಜವಾಬ್ದಾರಿಯನ್ನು ಸುಗುಣೇಂದ್ರ ತೀರ್ಥರು ಕೊಟ್ಟಿದ್ದಾರೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ವಿಶ್ವ ಎಂದರೆ ಪ್ರಾಣ ದೇವರು. ಈ ಸುವರ್ಣ ಪೀಠದಲ್ಲಿ ಅವರು ಇಲ್ಲಿ ಚೆನ್ನಾಗಿ ವಾಸ ಮಾಡುತ್ತಾರೆ. ಆದ್ದರಿಂದ ಇದು ವಿಶ್ವವಸು ಪೀಠ ಎಂದು ಕರೆದರು.

ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದ ಸಮಾರಂಭದಲ್ಲಿ ಅನೇಕ ಮಂದಿ ಭಕ್ತರು ಹಾಗೂ ವಿದ್ವಾಂಸರು ಪಾಲ್ಗೊಂಡರು.

ವಾಯು ದೇವರ ಅವತಾರತ್ರಯ ಮತ್ತು ರಾಮ, ವಿಠಲ ದೇವರ ಚಿತ್ರಗಳಿರುವ ಈ ಕವಚವನ್ನು 24 ಕ್ಯಾರೆಟ್‌ ಶುದ್ಧ ಚಿನ್ನದಲ್ಲಿ ನಿರ್ಮಿಸಲಾಗಿದೆ. ಇದನ್ನು ನಿರ್ಮಿಸಿದ ಗಂಜೀಫಾ ರಘುಪತಿ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ