ಅಂಬೇಡ್ಕರ್ ಜನಾಕರ್ಷಣೆಯ ವಿಶ್ವನಾಯಕ: ಡಾ.ಜಯಪ್ರಕಾಶ್

KannadaprabhaNewsNetwork | Published : Apr 15, 2025 12:46 AM

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಸಮಾರಂಭಕ್ಕೆ ಮನೋರಖ್ಖಿತ ಬಂತೇಜಿ, ಡಾ.ಬಂಜಗೆರೆ ಜಯಪ್ರಕಾಶ್ ಚಾಲನೆ ನೀಡಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ತಹಸೀಲ್ದಾರ್ ಬಸವರಾಜು ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಹಬ್ಬದ ಮಾದರಿಯಲ್ಲಿ ವಿವಿಧ ಸಮುದಾಯಗಳನ್ನು ಆಹ್ವಾನಿಸಿ ಅರ್ಥಪೂರ್ಣ ಡಾ.ಅಂಬೇಡ್ಕರ್ 134ನೇ ಜಯಂತಿ ಮಹೋತ್ಸವವನ್ನು ಆಚರಿಸುತ್ತಿರುವುದು, ಆ ಮೂಲಕ ಬಾಬಾ ಸಾಹೇಬರನ್ನು ಸ್ಮರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಮಾತ್ರವಲ್ಲ ಇದೊಂದು ಗಮನಾರ್ಹ, ಸ್ತುತ್ಯಾರ್ಹ ಕಾರ್ಯಕ್ರಮ. ಇದನ್ನು ಕಂಡು ನನ್ನ ಮನ ತುಂಬಿದೆ ಎಂದು ಸಾಹಿತಿ, ಚಿಂತಕ, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ತಾಲೂಕು ಆಡಳಿತ, ತಾಲೂಕು ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಡಾ.ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಬಾಬಾ ಸಾಹೇಬರು ಜನಾಕರ್ಷಣೆಯ ವಿಶ್ವನಾಯಕರು. ಸಂವಿಧಾನದಲ್ಲಿ ಎಲ್ಲ ವರ್ಗಗಳಿಗೂ ನ್ಯಾಯ ಸಲ್ಲಿಸಿದ್ದಾರೆ. ಅವರನ್ನು ಕೊಳ್ಳೇಗಾಲದಲ್ಲಿ ಹಬ್ಬದ ಮಾದರಿಯಲ್ಲಿ ಸ್ಮರಿಸಿ ಸಂಭ್ರಮಿಸುತ್ತಿರುವುದು ನಿಜಕ್ಕೂ ಸಂತಸವಾಗುತ್ತಿದೆ, ಕೊಳ್ಳೇಗಾಲದಂತಹ ಪ್ರದೇಶದಲ್ಲಿ ಇಂತಹ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಹಲವು ವರುಷಗಳೇ ಸಂದಿದ್ದು , ಇಂತಹ ಕಾರ್ಯಕ್ರಮ ನಡೆಯಬೇಕೆಂಬ ಅಭಿಮಾನಿಗಳು ಕನಸು ಇಂದು ಆ ಕನಸು ಈಡೇರಿದೆ ಎಂದರು. ಈ ಹಿಂದೆ ದಲಿತ ಕೇರಿಗಳಲ್ಲಿ ಮಾತ್ರ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿತ್ತು, ಅವರ ಕೊಡುಗೆ, ಶಕ್ತಿ ಏನು ಎಂಬುದು ಹಿಂದಿನ ಮಂದಿಗೆ ಅರಿವಿರಲಿಲ್ಲ, ಆದರೆ ಇಂದು ಕಾಲ ಬದಲಾಗಿದೆ ಭಾರತದ ಬಹುಸಂಖ್ಯಾತ ಸಮುದಾಯಗಳು ಅವರನ್ನು ಪ್ರಸ್ತುತ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಅವರ ಕೊಡುಗೆ ಮಹತ್ವ ಕ್ರಮೇಣವಾಗಿ ಜನ ಸಮುದಾಯಕ್ಕೆ ಅರಿವಾಗುತ್ತಾ ಬಂದಿದ್ದು ಪ್ರತಿಯೊಂದು ವರ್ಗಗಳ ಮುನ್ನಡೆಗೆ ಸಂವಿಧಾನ ಸಹಕಾರಿಯಾಗಿದೆ. ಜನತೆ ಶಕ್ತಿಯನ್ನು ಯಾರು ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ತೋರಿಸಿದ್ದಾರೆ, ನಾವೆಲ್ಲರೂ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಹಾದಿಯತ್ತ ಸಾಗೋಣ, ಇಂದಿನ ಯಶಸ್ವಿ ಕಾರ್ಯಕ್ರಮಕ್ಕೆ ಶಾಸಕ ಕೃಷ್ಣಮೂರ್ತಿ, ಸಮಸ್ತ ಭೀಮ ಬಂಧುಗಳು ಹಾಗೂ ಅಧಿಕಾರಿಗಳು ಸಹಕಾರದಿಂದ ಕಾರಣವಾಗಿದೆ ಎಂದರು.

ಚಿಕ್ಕಮಾಳಿಗೆ ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ ಮಾತನಾಡಿ, ನಾವು ಡಾ.ಅಂಬೇಡ್ಕರ್ ಅವರನ್ನು ಮನೆ ದೇವರಂತೆ, ತಂದೆ, ತಾಯಿಯಂತೆ ಅಪ್ಪಿಕೊಂಡಿದ್ದೇವೆ, ಪೂಜಿಸಿದ್ದೆವೆ, ಅವರು ನೀಡಿದ ಸಂವಿಧಾನದಿಂದ ನಾವೆಲ್ಲರೂ ಗೌರವಯುತವಾಗಿ ಬದುಕು ನಡೆಸುವಂತಾಗಿದೆ ಎಂದರು.

ತಾಲೂಕು ಆಡಳಿತ ಉತ್ತಮ ರೀತಿಯಲ್ಲಿ ಯಾವುದೆ ಲೋಪವಿಲ್ಲದೆ ಕಾರ್ಯಕ್ರಮ ರೂಪಿಸಿದ್ದಾರೆ. ಶಾಸಕರು ಸಹಾ ಪೂರ್ವಭಾವಿ ಸಭೆಯಲ್ಲಿ ನುಡಿದಂತೆ ನಡೆದುಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ಕೈಜೋಡಿಸಿದ್ದಾರೆ, ಆನೆ ತರಲು ಶಾಸಕರು ನೂರರಷ್ಟು ಪ್ರಯತ್ನ ಪಟ್ಟಿದ್ದರು, ಆದರೆ ಅದು ನಾನಾ ಕಾರಣಗಳಿಗಾಗಿ ತರಿಸಲಾಗಲಿಲ್ಲ, ಬಾಬಾ ಸಾಹೇಬರ ಆಶಯಗಳನ್ನು ನಾವೆಲ್ಲರೂ ಪಾಲಿಸೋಣ, ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ ಎಂದರು.

ಅಂಬೇಡ್ಕರ್ ಎಂದರೆ ಜ್ಞಾನವಿದ್ದಂತೆ:ಶಾಸಕ ಎಆರ್ ಕೃಷ್ಣಮೂರ್ತಿ ಮಾತನಾಡಿ, ಅಂಬೇಡ್ಕರ್ ಎಂದರೆ ಜ್ಞಾನವಿದ್ದಂತೆ, ಹಾಗಾಗಿ ಅವರನ್ನು ಮತ್ತು ಅವರ ರಚಿಸಿರುವ ಸಂವಿಧಾನವನ್ನು ಗೌರವಿಸುವ ಕೆಲಸವನ್ನು ಮಾಡೋಣ ಎಂದರು. ಮನುಷ್ಯ ಮನುಷ್ಯನ ಮೇಲೆ ಧ್ವೇಷ ಸಾಧಿಸುವುದು, ಅತ್ಯಾಚಾರ ಪ್ರಕರಣ ಇಂದಿಗೂ ಜರುಗುತ್ತಿರುವುದು ವಿಷಾದನೀಯ, ಅಂತಹ ತಪ್ಪಿತಸ್ಥರಿಗೆ ಇನ್ನು ಸೂಕ್ತ ಕ್ರಮ ಆಗುತ್ತಿಲ್ಲ, ಸಾಕ್ಷಿ ನಾಶಮಾಡಲಾಗುತ್ತಿದೆ ಎಂದು ವಿಷಾದಿಸಿದರು. ಮೀಸಲಾತಿ ವಿಚಾರದಲ್ಲಿ ಅವರು ನೀಡಿದ ಮೀಸಲಾತಿ ಎಲ್ಲಾ ಧರ್ಮ, ವರ್ಗಕ್ಕೂ ಅನುಕೂಲವಾಗಿದೆ. ದಲಿತ ಸಮಾಜದಲ್ಲಿ ನೂರಕ್ಕೂ ಅಧಿಕ ಉಪಜಾತಿಗಳನ್ನು ಕಾಣುತ್ತಿದ್ದೇವೆ, ಮೀಸಲಾತಿ ಅನುಗುಣವಾಗಿ ಉದ್ಯೋಗಕ್ಕೆ ನಾವು ನ್ಯಾಯಾಲಯದ ತೀರ್ಮಾಕ್ಕೆ ಕಾಯಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಮರ್ಪಕ ರೀತಿಯಲ್ಲಿ ಗಮನಹರಿಸುತ್ತಿಲ್ಲ ಎಂದರು. ಚೇತವನ ಬೌದ್ದ ವಿಹಾರದ ಮನೋರಖ್ಖಿತ ಬಂತೇಜಿ, ತಹಸೀಲ್ದಾರ್ ಬಸವರಾಜು, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಕುಂತೂರು ಮೋಳೆ, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಡಿವೈಎಸ್ಪಿ ಧರ್ಮೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕೇಶವಮೂರ್ತಿ, ದಲಿತ ಸಮಾಜದ ಮುಖಂಡರು, ಅಭಿಮಾನಿಗಳು ಪಾಲ್ಗೊಂಡರು.ಅಂಬೇಡ್ಕರ್ ಆಲೋಚನೆಗೆ ಎಆರ್‌ಕೆ

ಬದ್ಧರಾಗಿದ್ದಾರೆ: ಡಾ.ಬಂಜಗೆರೆ

ಶಾಸಕ ಕೃಷ್ಣಮೂರ್ತಿ ಅವರು ನಿಜ ಅರ್ಥದಲ್ಲಿ ಅವರೊಬ್ಬ ಅಂಬೇಡ್ಕರ್ ಅನುಯಾಯಿ ಮಾತ್ರವಲ್ಲ, ಅವರ ಆಲೋಚನೆಗೆ ಬದ್ಧರಾಗಿದ್ದಾರೆ, ರಾಜಕಾರಣದಲ್ಲೂ ಸಹಾ ಅತ್ಯುತ್ತಮ ವ್ಯಕ್ತಿತ್ವ ಕಾಪಾಡಿಕೊಂಡಿದ್ದಾರೆ ಎಂದು ಸಾಹಿತಿ, ಚಿಂತಕ, ಅಂಬೇಡ್ಕರವಾದಿ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು. ನಾನು, ಕೃಷ್ಣಮೂರ್ತಿ ಮಹಾರಾಜ ಕಾಲೇಜಿನಲ್ಲಿ ಸಹಪಾಠಿಗಳು, ನನಗೆ ಅವರು ಆತ್ಮೀಯ ಸ್ನೇಹಿತರು. ಅವರ ಬಗ್ಗೆ ನಾನು ಹೆಚ್ಚು ಬಲ್ಲೆ, ಅವರು ನಿಜ ಅರ್ಥದಲ್ಲಿ ಅಂಬೇಡ್ಕರ್ ಅನುಯಾಯಿ ಮತ್ತು ಆಲೋಚನೆಗೆ ಬದ್ಧರಾಗಿದ್ದಾರೆ. ತಂದೆಯಂತೆ ಉತ್ತಮ ನಡೆ ರೂಪಿಸಿಕೊಂಡಿದ್ದಾರೆ. ಅತ್ಯುತ್ತಮ ಗುಣ ಹೊಂದಿರುವ ಶಾಸಕರು ತೂಕದ ಮಾದರಿ ರಾಜಕಾರಣಿ. ಅವರ ಸಹಕಾರದಿಂದ ಅನೇಕ ಮಂದಿ ಪತ್ರಿಕೋದ್ಯಮ ತರಬೇತಿ ಮುಗಿಸಿದ್ದಾರೆ, ಅಂತಹ ಸಜ್ಜನರನ್ನು ಗೆಲ್ಲಿಸಿರುವ ಜನತೆಗೆ ಮತ್ತು ನಿಮ್ಮನ್ನು ಮುನ್ನಡೆಸುತ್ತಿರುವ ಶಾಸಕರಿಗೆ ನಾನು ಅಭಿನಂದನೆ ಸಲ್ಲಿಸುವೆ ಎಂದರು.

ಎಲ್ಲರೂ ಅಂಬೇಡ್ಕರ್ ಅವರಂತೆ ಬದುಕಿ. ಅವರು ನಮಗೆ ಗುರು ಮಾತ್ರವಲ್ಲ ಮನೆ ದೇವರು. ಅಂಬೇಡ್ಕರ್ ಎಂದರೆ ಜ್ಞಾನ ಮಾತ್ರವಲ್ಲ, ಅವರ ಮಾನವೀಯತೆ ಪ್ರಜ್ಞೆ, ಅವರ ಇತಿಹಾಸ ಅರಿತು ನಾವೆಲ್ಲರೂ ಸಮಾನತೆಯಿಂದ ಬಾಳೋಣ. ಭೀಮ ಬಂಧುಗಳ ಮನೆ ದೇವರಾದ ಅಂಬೇಡ್ಕರ್ ಹೆಸರಲ್ಲಿ ಪ್ರತಿಜ್ಞೆ ಮಾಡುವ ಮೂಲಕ ಮದ್ಯ ತ್ಯಜಿಸಲು ಪಣತೊಡಿ. -ಮನೋರಖ್ಖಿತ ಬಂತೇಜಿ, ಚೇತನನ ಬೌದ್ದ ವಿಹಾರ, ಚನ್ನಾಲಿಂನಹಳ್ಳಿ

Share this article