ಗಜೇಂದ್ರಗಡ: ತಾಲೂಕಿನ ಐತಿಹಾಸಿಕ ಕಾಲಕಾಲೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ಸಮೀಪದ ರಾಜೂರ ಗ್ರಾಮದ ಜಮೀನಿನಲ್ಲಿ ಸೋಮವಾರ ಗಡ್ಡಿ ಬಂಡಿ ಓಟದ ಸ್ಪರ್ಧೆ ನಡೆಯಿತು.
ಈ ವೇಳೆ ಮುಖಂಡ ಬಿ.ಎಸ್. ಶೀಲವಂತರ ಮಾತನಾಡಿ, ರೈತರ ಕೃಷಿ ಚಟುವಟಿಕೆ ಪೂರ್ಣಗೊಳಿಸಿದ ನಂತರ ಗಡ್ಡಿ ಬಂಡಿ ಓಟದ ಸ್ಪರ್ಧೆಯ ಮೂಲಕ ಗ್ರಾಮೀಣ ಸೊಗುಡು ಮೆರೆಯುವುದು ವಾಡಿಕೆ. ಈ ಭಾಗದಲ್ಲಿ ನಡೆಯುತ್ತಿರುವ ವಿರಳ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿರುವುದು ಖುಷಿ ತಂದಿದೆ. ಇಂತಹ ಅನೇಕ ಸ್ಪರ್ಧೆಗಳು ಕಾಲಾನಂತರ ಮರೆಯಾಗಿವೆ. ಸಾಂಪ್ರದಾಯಿಕ ಆಟಗಳ ಬಗ್ಗೆ ಆಸಕ್ತಿ ಇದ್ದಷ್ಟು ಹೊಸ ಆಟಗಳಲ್ಲಿಲ್ಲ ಎಂದ ಅವರು, ಈ ಭಾಗದ ರೈತ ಸಮೂಹ ಮಳೆಯಾಧಾರಿತ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಆರ್ಥಿಕ ಪ್ರಗತಿಯ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಸರ್ಕಾರಗಳು ಈ ಭಾಗದಲ್ಲಿ ಸಮರ್ಪಕ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಬೇಕು ಎಂದರು."ಪಟ್ಟಣ ಸಮೀಪದ ರಾಜೂರ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಗಡ್ಡಿ ಬಂಡಿ ಓಟದ ಸ್ಪರ್ಧೆಯಲ್ಲಿ ರೋಣ, ಯಲಬುರ್ಗಾ, ಕುಷ್ಟಗಿ, ಹುನಗುಂದ ತಾಲೂಕಿನ ೪೦ಕ್ಕೂ ಅಧಿಕ ಗಡ್ಡಿ ಬಂಡಿಗಳು ಭಾಗವಹಿಸಿದ್ದವು. ಒಂದಕ್ಕಿಂತ ಇನ್ನೊಂದು ಪವರ್ ಫುಲ್ ಆಗಿದ್ದವು. ಸ್ಪರ್ಧೆ ನೋಡಲು ಬಂದಿದ್ದ ಜನರ ಶಿಳ್ಳೆ ಹಾಗೂ ಚಪ್ಪಾಳೆಗಳು ಸ್ಪರ್ಧೆ ಸಂಭ್ರಮ ದುಪ್ಪಟ್ಟಾಗುವಂತೆ ಮಾಡಿದ್ದವು. "ಕಾರ್ಯಕ್ರಮದ ಅಧ್ಯಕ್ಷತೆ ದಾನು ರಾಠೋಡ ವಹಿಸಿದ್ದರು. ಬಸವರಾಜ ಬೂದಿಹಾಳ ಕಾರ್ಯಕ್ರಮ ಉದ್ಘಾಟಿಸಿದರು. ಶರಣಪ್ಪ ಹದರಿ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದರು. ಪರಶುರಾಮ ರಾಠೋಡ, ಮಹೇಶ ಮುಕ್ತಲಿ, ನಾರಾಯಣ ರಾಠೋಡ, ಸುರೇಶ ಕಲಾಲ, ಹುಸೇನಸಾಬ ನಿಶಾನದಾರ, ಸಿದ್ದಪ್ಪ ನರಗುಂದ, ಮಂಜುಪ್ಪ ಮಾಳೊತ್ತರ, ನರಸಪ್ಪ ಮಾಳೊತ್ತರ, ನಾಗಪ್ಪ ವ್ಯಾಪಾರಿ, ರಾಜು ನಿಶಾನದಾರ, ಸುರೇಶ ಗುಳಗುಳಿ, ತಾವರೆಪ್ಪ ಮಾಳೊತ್ತರ, ಕಳಕಪ್ಪ ಶಂಕ್ರಿ, ರಾಜೇಶ ವರ್ಣೇಕರ ಸೇರಿ ಇತರರು ಇದ್ದರು.