ಕನ್ನಡಪ್ರಭ ವಾರ್ತೆ ಕೋಲಾರಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ, ಅವರು ಇಡೀ ವಿಶ್ವಕ್ಕೆ ಮಾದರಿಯಾದ ಮಹಾನ್ ವ್ಯಕ್ತಿ. ಜಿಲ್ಲಾಡಳಿತ ಭವನದಲ್ಲಿ ಅವರ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಎಂದು ತಿಳಿಸಿದರು.ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು ೧.೫ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ೨೧ ಅಡಿಯ ಕಂಚಿನ ಭವ್ಯ ಪ್ರತಿಮೆಯ ಸ್ಥಾಪನೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿ, ಕೋಲಾರಕ್ಕೆ ಮಂಜೂರಾಗಿರುವ ನೂತನ ವೈದ್ಯಕೀಯ ಕಾಲೇಜಿನ ಡಿಪಿಆರ್‌ನನ್ನು ೧೫ ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇಂದು ಅದರ ಅಂತಿಮ ಪರಿಶೀಲನೆಗಾಗಿ ಸ್ಥಳ ವೀಕ್ಷಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೋಲಾರ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಪ್ರತಿಮೆಯನ್ನು ತುಮಕೂರಿನಲ್ಲಿರುವ ೧೨ ಅಡಿಯ ಪ್ರತಿಮೆಗಿಂತಲೂ ಎತ್ತರವಾಗಿ, ಅಂದರೆ ೨೧ ಅಡಿ ಎತ್ತರದಲ್ಲಿ ಸುಮಾರು ೧೨೦೦ ಕೆಜಿಗೂ ಅಧಿಕ ತೂಕದ ಕಂಚಿನಿಂದ ನಿರ್ಮಿಸಲಾಗುತ್ತಿದೆ. ಸುಮಾರು ೯೫ ಲಕ್ಷ ರು.ಗಳ ವೆಚ್ಚದಲ್ಲಿ ಪ್ರತಿಮೆ ಹಾಗೂ ಪ್ರತಿಮೆಯ ಸುತ್ತಮುತ್ತಲಿನ ಪರಿಸರ ಸುಂದರಗೊಳಿಸಲು ೫೫ ಲಕ್ಷ ರು.ಗಳನ್ನು ಮೀಸಲಿಡಲಾಗಿದೆ, ಈ ಯೋಜನೆಗೆ ಸರ್ಕಾರದ ನೇರ ಅನುದಾನದ ಲಭ್ಯತೆ ಇಲ್ಲದ ಕಾರಣ, ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಹಣ ಕ್ರೋಢೀಕರಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮಾತನಾಡಿ "ಜಿಲ್ಲೆಯ ಶಕ್ತಿ ಕೇಂದ್ರವಾದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗುತ್ತಿರುವುದು ಸಮಾನತೆ ಮತ್ತು ಸಂವಿಧಾನಕ್ಕೆ ನಾವು ಸಲ್ಲಿಸುವ ದೊಡ್ಡ ಗೌರವ ಎಂದು ಬಣ್ಣಿಸಿದರು.
ಪ್ರತಿಮೆಯ ಜೊತೆಗೆ ಕೋಲಾರದಲ್ಲಿ ಅಂಬೇಡ್ಕರ್ ಜೀವನ ಮತ್ತು ಸಾಧನೆ ಬಿಂಬಿಸುವ ಅತ್ಯಾಧುನಿಕ ಮ್ಯೂಸಿಯಂ, ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಈಕಂಬಳ್ಳಿಯಲ್ಲಿ ೫ ಎಕರೆ ಜಮೀನು ಗುರುತಿಸಿದೆ. ಮಂಗಸಂದ್ರದ ಬಳಿ ೨ ಎಕರೆ ಜಮೀನಿನಲ್ಲಿ ಬೌದ್ಧ ವಿಹಾರ ನಿರ್ಮಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಎಸ್.ಎಂ.ಮಂಗಳ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಎಸಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್, ಮುಖಂಡರಾದ ಡಾ.ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ, ನಗರಸಭೆ ಆಯುಕ್ತ ನವೀನ್ ಚಂದ್ರ, ತಾಪಂ ಇಓ ಮಂಜುನಾಥ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್ ಇದ್ದರು.