ಗದಗ: ಮನುಷ್ಯರನ್ನು ಗುಲಾಮರನ್ನಾಗಿ ಮಾಡಿದವರನ್ನು ನಾವು ನೋಡಿದ್ದೇವೆ, ಆದರೆ ಗುಲಾಮರನ್ನು ರಾಜ ಮಹಾರಾಜರನ್ನಾಗಿಸಿದವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.
ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಬುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಅಭಿಸ್ಮರಣೀಯ. ತಮ್ಮೆಲ್ಲರಿಗೂ ವಿದ್ಯಾಭ್ಯಾಸ, ಶಿಕ್ಷಣ ಓದು ಎಷ್ಟು ಮುಖ್ಯ ಎಂಬುದನ್ನು ಡಾ.ಅಂಬೇಡ್ಕರ್ ನೋಡಿ ಅರಿಯಬೇಕಿದೆ. ನಮ್ಮಲ್ಲಿ ಸಾಧನೆ ಮಾಡಲು ಇಚ್ಛಾಶಕ್ತಿ ಬೇಕು, ಇಚ್ಛಾಶಕ್ತಿ ಇದ್ದಲ್ಲಿ ಸಾಧನೆ ಸಾಧ್ಯ ಎಂದರು. ಹುಲಕೋಟಿ ಜಿಸಿಟಿಎಂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರ್ಜುನ್ ಗೋಳಸಂಗಿ ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಸ್ವಾಭಿಮಾನ ನಮ್ಮತನ ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದರು.ಆದರ್ಶ ಶಿಕ್ಷಣ ಸಮಿತಿ ಅಧ್ಯಕ್ಷ ಕೆ.ವಿ.ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಗಿರಿರಾಜಕುಮಾರ್ ಸಂವಿಧಾನದ ಪ್ರಸ್ತಾವನೆ ಓದಿಸಿದರು. ಉಪಪ್ರಾಚಾರ್ಯ ಡಾ. ವಿ.ಟಿ.ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ.ಹಾಜರಿದ್ದರು.