ಕನ್ನಡಪ್ರಭ ವಾರ್ತೆ ಮೈಸೂರು
ನೀಲಗಾರರ ಶೈಲಿಯಲ್ಲಿ ಅಂಬೇಡ್ಕರ್ ಅವರ ಹಾಡುಗಳನ್ನು ಹಾಡಿ, ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ಕಲಾಮಂದಿರದ ಕಿಂದರಿಜೋಗಿ ಆವರಣದಲ್ಲಿ ನಡೆದ ಜನಪದೋತ್ಸವದಲ್ಲಿ ಇದೇ ಮೊದಲ ಬಾರಿಗೆ ಬಾಬಾ ಸಾಹೇಬರ ಜೀವನ ಚರಿತ್ರೆಯನ್ನು ನೀಲಗಾರರ ಹಾಡಿನ ರೂಪದಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವೆನಿಸಿತು.
ಬಾಬಾ ಸಾಹೇಬ ಇನ್ನೊಮ್ಮೆ ಬಾ ಬಾ.... ಹಾಡಿನೊಂದಿಗೆ ಪ್ರಾರಂಭಿಸಿದ ಅವರು ಅಂಬೇಡ್ಕರ್ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ, ದಾಂಪತ್ಯದ ಬದುಕು, ಸಂವಿಧಾನ ಬರೆದ ಪರಿಯ ಹಾಡುಗಳಿಗೆ ನೆರೆದಿದ್ದವರು ಸಂತುಷ್ಟರಾದರು.ಭೀಮರು ಬಂದರು ಸಂವಿಧಾನ ಹೊತ್ತು ತಂದರು....ಸತ್ಯವಂತರ ಕಥೆಯ ಉತ್ತಮ ಉತ್ತಮರು ಕೇಳಿ ಹೀಗೆ ನಾನಾ ಗೀತೆಗಳ ಮೂಲಕ ಅಂಬೇಡ್ಕರ್ ಹೀಗೆ ಜೀವನ ಚರಿತ್ರೆ ತೆರೆದಿಟ್ಟರು.
ಇದಕ್ಕೂ ಮುನ್ನ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬಸವರಾಜ್ ಮತ್ತು ತಂಡ ಪ್ರಸ್ತುತ ಪಡಿಸಿದ ನಂದಿ ಕೋಲು ನೃತ್ಯ ಪ್ರದರ್ಶನ ಜನಪದ ಕಾರ್ಯಕ್ರಮಕ್ಕೆ ಹೊಸ ರಂಗು ನೀಡಿತು.
ಕಿರುರಂಗ ಮಂದಿರದಲ್ಲಿ ಶಬ್ಧ್ ಥಿಯೇಟರ್ ಗ್ರೂಪ್ ವತಿಯಿಂದ ಸಚಿನ್ ಮಾಲ್ವಿ ರಚನೆ ಮತ್ತು ನಿರ್ದೇಶನದ ಶಿಫಾರ್ ಹಿಂದಿ ನಾಟಕ ಪ್ರದರ್ಶಿಸಲಾಯಿತು. ಕಲಾಮಂದಿರದಲ್ಲಿ ಉಜ್ಜೈನ್ ನ ಅಂಕೂರ್ ರಂಗಮಂಚ್ ಸಮಿತಿ ಕಲಾವಿದರು, ಇವಾನ್ ಕಾನ್ ರಚನೆ, ಹಫೀಜ್ ಖಾನ್ ನಿರ್ದೇಶನದ ಅಂಬೇಡ್ಕರ್ ಕ ಬಚ್ಚನ್ ನಾಟಕವನ್ನು ಅಮೋಘವಾಗಿ ಅಭಿನಯಿಸಿದರು.