ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ಜ್ಯೋತಿಗೌಡನಪುರದಲ್ಲಿ ಇತ್ತೀಚೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧ ಪ್ರತಿಮೆಯನ್ನು ವಿರೂಪಗೊಳಿಸಿರುವ ಆರೋಪಿಗಳನ್ನು ಬಂಧಿಸಬೇಕು. ಇಂತಹ ಘಟನೆಗಳು ಮುರುಕಳಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಆರೋಪಿಗಳು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಒತ್ತಾಯಿಸಿದರು.ತಾಲೂಕಿನ ಜ್ಯೋತಿನಗೌಡಪುರಕ್ಕೆ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅವರೊಂದಿಗೆ ಭೇಟಿ ನೀಡಿದ್ದ ಅವರು, ಘಟನಾ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಮುಖಂಡರೊಂದಿಗೆ ತೆರಳಿ ಪರಿಶೀಲನೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ಫ್ಲೆಕ್ಸ್ ಹರಿದು ಹಾಕಿ ವಿಕೃತಿ ಮೆರೆದವರಿಗೆ ಶಿಕ್ಷೆಯಾಗಬೇಕು. ಇದುವರೆಗೆ ಅಂಬೇಡ್ಕರ್ ವಿಗ್ರಹ ಹಾಗೂ ಫೋಟೋಗಳಿಗೆ ಮಾತ್ರ ದಾಳಿಗಳು ಹಾಗೂ ಅಪಮಾನ ಮಾಡುವಂತಹ ಪ್ರಕರಣಗಳನ್ನು ನೋಡಿದ್ದೇವು. ಈಗ ಶಾಂತಿ ಪ್ರಿಯ ಜಗತ್ತಿಗೆ ಭೌದ್ದ ಧರ್ಮವನ್ನು ಭೋದನೆ ಮಾಡಿದ ಬುದ್ಧ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಇದೊಂದು ಹೇಯ ಕೃತ್ಯವಾಗಿದೆ. ಇಡೀ ಸಮಾಜವೇ ತಲೆತಗ್ಗಿಸುವಂತಹ ವಿಚಾರವಾಗಿದೆ ಎಂದರು.ರಾಜ್ಯಪಾಲರಾಗಿದ್ದ ನನ್ನ ತಂದೆ ದಿ. ಬಿ. ರಾಚಯ್ಯ ಈಗ ಭಾಗದ ಜನರ ಆರ್ಶಿವಾದದಿಂದಲೇ ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿದ್ದವರು. ನಮ್ಮ ಜನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡವರು. ಬುದ್ಧ ,ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರು. ಇಂಥ ಅನೇಕ ಘಟನೆಗಳ ನಡೆದಾಗ ನಿಷ್ಠುರವಾಗಿ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಅವರ ಹಾದಿಯಲ್ಲಿಯೇ ನಾನು ಸಹ ಶಾಸಕನಾಗಿ ನಿಮ್ಮೆಲ್ಲರ ಬೆಂಬಲವಾಗಿ ನಿಲ್ಲುತ್ತೇನೆ. ಈ ಘಟನೆಯನ್ನು ಖಂಡಿಸುವ ಜೊತೆಗೆ ನಿಮ್ಮ ಎಲ್ಲಾ ಹೋರಾಟಕ್ಕೆ ಬದ್ಧನಾಗಿದ್ದೇನೆ, ಸರ್ಕಾರದ ಮಟ್ಟದಲ್ಲಿಯೂ ಸಹ ಈ ಘಟನೆಯ ಪ್ರಮುಖ ಆರೋಪಿಗಳ ಬಂಧಿಸಬೇಕು ಎಂಬ ಒತ್ತಾಯ ಮಾಡುತ್ತೇನೆ ಎಂದರು.
ಈಗಾಗಲೇ ಪೊಲೀಸ್ ಇಲಾಖೆಯ ಆರೋಪಿಗಳ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ನಮಗೆ ನೀಡಿದ ಮಾಹಿತಿಯಂತೆ ಶೇ. ೭೦ ರಷ್ಟು ತನಿಖೆ ಪೂರ್ಣವಾಗಿದ್ದು, ಆರೋಪಿಗಳನ್ನು ಇನ್ನು ಎರಡು ದಿನಗಳಲ್ಲಿ ಬಂಧಿಸುವುದಾಗಿ ಹೇಳಿದ್ದಾರೆ. ನಿಜವಾದ ಆರೋಪಿಗಳ ಬಂಧನವಾಗಬೇಕು. ಪ್ರಕರಣದಲ್ಲಿ ಭಾಗಿಯಾಗಿರುವವರ ಪತ್ತೆಗೆ ಇಲಾಖೆಗೆ ಮುಂದಾಗಬೇಕು. ಗೂಬೆ ಕೂರಿಸುವ ಕೆಲಸ ಮಾಡಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಿ, ಪೊಲೀಸ್ ಇಲಾಖೆಯು ತನಿಖೆ ಮಾಡಿ ತಪ್ಪಿಸ್ಥರನ್ನು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೃಷ್ಣಮೂರ್ತಿ ಆಗ್ರಹಿಸಿದರು.ಉಗ್ರ ಹೋರಾಟದ ಎಚ್ಚರಿಕೆ:
ಮೈಸೂರಿನ ಉರಿಲಿಂಗಿಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಇಂತಹ ಘಟನೆಯಲ್ಲಿ ಭಾಗಿಯಾಗಿರುವರು ಎಷ್ಟೇ ಪ್ರಬಲವಾಗಿದ್ದರು. ಯಾವುದೇ ಜಾತಿಯವರಾಗಿದ್ದರು ಇನ್ನು ಎರಡು ದಿನಗಳಲ್ಲಿ ಬಂಧಿಸಿ, ನಮ್ಮ ಜನಕ್ಕೆ ನ್ಯಾಯ ಕಲ್ಪಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ರಾಜ್ಯ, ದೇಶಕ್ಕೆ ವಿಸ್ತರಣೆ ಮಾಡಬೇಕಾಗುತ್ತದೆ. ಎಲ್ಲಿಂದಲೇ ನಮ್ಮ ಹೋರಾಟ ಆರಂಭವಾಗುತ್ತದೆ.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಪ್ರಕಾರವೇ ಅವರಿಗೆ ಶಿಕ್ಷೆ ಕೊಡಿಸುತ್ತೇವೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ. ಅಂಬೇಡ್ಕರ್ ಅವರು ಸಹ ಮಹಿಳೆಯರ ಪರವಾಗಿದ್ದವರು. ಅವರಿಗೆ ಈಗ ಆಗಿರುವ ಅಪಮಾನದ ವಿರುದ್ದ ನೀವು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಎಲ್ಲಾ ಸಂಘಟನೆಗಳ ಬೆಂಬಲ ಇರುತ್ತದೆ ಎಂದು ಘೋಷಣೆ ಮಾಡಿದರು.
ಕರ್ನಾಟಕ ಬಂದ್ ಗೆ ಕರೆ:ದಲಿತ ಮಹಾಸಭಾದ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ಅಂಬೇಡ್ಕರ್ ಹಾಗೂ ಬುದ್ಧ ನಮ್ಮ ಎರಡು ಕಣ್ಣುಗಳಿದ್ದಂತೆ. ಅವರಿಗೆ ಮಾಡಿರುವ ಅಪಮಾನವನ್ನು ಸಹಿಸಿಕೊಂಡು ಸುಮ್ಮನೆ ಕೂರುವ ಮನಸ್ಥಿತಿ ನಮ್ಮದಲ್ಲ. ನಾವು ಮೌನವಾಗಿದ್ದೇವೆ ಎಂದರೆ, ಅಂಬೇಡ್ಕರ್ ಅವರು ಕೊಟ್ಟಿರುವ ಕಾನೂನಿನ ಪ್ರಕಾರ ಅವರ ಬಂಧನವಾಗುತ್ತದೆ ಎಂದು ತಿಳಿದುಕೊಂಡಿದ್ದೇವೆ. ಮಂಗಳವಾರದ ಒಳಗೆ ಈ ಘಟನೆಗೆ ಕಾರಣರದವರ ಬಂಧನವಾಗದಿದ್ದರೆ, ಜ್ಞಾನ ಪ್ರಕಾಶ್ ಸ್ವಾಮೀಜಿಗಳ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಬೇಕಾಗುತ್ತದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಶೀಘ್ರ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ, ಜಿ.ಪಂ. ಮಾಜಿ ಸದಸ್ಯ ಆರ್. ಬಾಲರಾಜು, ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಆರ್. ಮಹದೇವ್, ಮುಖಂಡರಾದ ಅರಕಲವಾಡಿ ಗುರುಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ರಮೇಶ್, ನಾಗವಳ್ಳಿ ನಾಗಯ್ಯ, ಹೆಬ್ಬಸೂರು ರಂಗಸ್ವಾಮಿ, ವೀರಭದಸ್ವಾಮಿ, ಸಿದ್ದಯ್ಯನಪುರ ಗೋವಿಂದರಾಜು, ವೀರಣ್ಣ, ನಾಗರಾಜು, ಮರಿಸ್ವಾಮಿ, ಗ್ರಾ.ಪಂ. ಮಹೇಶ್, ಆಶೋಕ್‌ಕುಮಾರ್, ಕಂದಹಳ್ಳಿ ನಂಜುಂಡಸ್ವಾಮಿ, ಗೋವಿಂದರಾಜು, ಇದ್ದರು.