ಅಂಬೇಡ್ಕರ್‌ ಪುತ್ಥಳಿ ಅಪಮಾನ: ಆರೋಪಿ ಕುಟುಂಬಸ್ಥರ ಮೇಲೆ ಹಲ್ಲೆ

KannadaprabhaNewsNetwork | Published : May 2, 2024 12:17 AM

ಸಾರಾಂಶ

ಕೋಟನೂರು (ಡಿ) ಪ್ರದೇಶದಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಮಾಡಿದ್ದ ಪ್ರಕರಣದಲ್ಲಿನ ಆರೋಪಿಯೊಬ್ಬರ ಮನೆಗೆ ನುಗ್ಗಿದ ಗುಂಪೊಂದು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ ಹಿಗ್ಗಾಮುಗ್ಗಾ ಥಳಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಹೊರ ವಲಯ ಕಲಬುರಗಿ- ಜೇವರ್ಗಿ ರಸ್ತೆಯಲ್ಲಿ ಬರುವ ಕೋಟನೂರು (ಡಿ) ಪ್ರದೇಶದಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಮಾಡಿದ್ದ ಪ್ರಕರಣದಲ್ಲಿನ ಆರೋಪಿಯೊಬ್ಬರ ಮನೆಗೆ ನುಗ್ಗಿದ ಗುಂಪೊಂದು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ ಹಿಗ್ಗಾಮುಗ್ಗಾ ಥಳಿಸಿದೆ ಎಂದು ಆರೋಪಿಯ ಕುಟುಂಬ ಸದಸ್ಯರು, ಬೆಂಬಲಿಗರು ಹಾಗೂ ವೀರಶೈವ- ಲಿಂಗಾಯಿತ ಸಮಾಜ ಮುಖಂಡರು ಸೇರಿ ಬುಧವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕಳೆದ ಜ.23ರಂದು ಕೋಟನೂರು ಅಂಬೇಡ್ಕರ್‌ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣದ ಆರೋಪಿ ಸಂಗಮೇಶ ಅವರಿಗೆ ಮಂಗಳವಾರ ನ್ಯಾಯಾಲಯ ಜಾಮೀನು ನೀಡಿತ್ತು. ಇದರಿಂದಾಗಿ ಸಂಗಮೇಶ ಜಾಮೀನು ಮೇಲೆ ಬಿಡುಗಡೆ ಕೂಡಾ ಆಗಿದ್ದರು.

ಇದನ್ನು ತಿಳಿದ ಕೋಟನೂರ್‌ (ಡಿ) ಊರಿನ ಮತ್ತೊಂದು ಗುಂಪು ಮಂಗಳವಾರ ರಾತ್ರಿ ಸಂಗಮೇಶ ಅವರ ಮನೆಗೆ ನುಗ್ಗಿ, ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂಗಮೇಶನ ಸಹೋದರ ಶಿವಕುಮಾರ್‌ ಹೇಳಿದ್ದಾರೆ.

ಸಂಗಮೇಶನ ಅಣ್ಣನ ಪತ್ನಿ ರಾಜೇಶ್ವರಿ, ತಮ್ಮ ಅನೀಲ್‌ ಕುಮಾರ್‌, ಚಿಕ್ಕಪ್ಪ ಮಹಾದೇವಪ್ಪ, ತಾಯಿಯಾದ ತಂಗೆಮ್ಮ ಇ‍ರೆಲ್ಲರೂ ಹಲ್ಲೆ ಘಟನೆಯಲ್ಲಿ ತೀವ್ರ ಗಾಯಗಳನ್ನು ಅನುಭವಿಸಿದ್ದಾರೆ. ಇವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲೇ ಚಿಕಿತ್ಸೆ ಮುಂದುವರಿದಿದೆ. ಮನೆಯ ಸಮೀಪ ನಿಲ್ಲಿಸಿದ್ದ 1 ಕಾರು, ನಾಲ್ಕಾರು ಬೈಕ್‌ಗಳನ್ನು ಹಲ್ಲೆಕೋರರು ಜಖಂ ಮಾಡಿದ್ದಾರೆ, ಇಷ್ಟೆಲ್ಲ ಆದರೂ ಕೂಡಾ ಪೊಲೀಸರು ಈವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಶಿವಕುಮಾರ್‌ ಆರೋಪಿಸಿದ್ದಾರೆ.

ಅಂಬೇಡ್ಕರ್‌ ಪುತ್ಥಳಿ ಅಪಮಾನ ಪ್ರಕರಣದಲ್ಲಿ ನನ್ನ ಪತಿ ಬಂಧಿತರಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರು ತಪ್ಪು ಮಾಡಿರುವುದು ಸಾಬೀತಾದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ, ಅದಕ್ಕೆ ನಮ್ಮದು ಯಾವುದೇ ತಕರಾರಿಲ್ಲ. ಆದರೆ, ಜಾಮೀನು ಮೇಲೆ ಬಿಡುಗಡೆಯಾಗಿದ್ದಕ್ಕೆ ಕುಟುಂಬ ಸದಸ್ಯರ ಮನೆಗೆ ನುಗ್ಗಿ ಅವರನ್ನೆಲ್ಲ ಥಳಿಸಿ ಹಲ್ಲೆ ಮಾಡಿರೋದು ಯಾವ ನ್ಯಾಯ? ಮನೆಗೆ ನುಗ್ಗಿ ಹೊಡೆದಿದ್ದಾರೆ. ರಕ್ಷಣೆಗೆ ಬನ್ನಿರೆಂದು ಗೋಗರೆದರೂ ಪೊಲೀಸರು ರಕ್ಷಣೆಗೆ ಬರಲೇ ಇಲ್ಲವೆಂದು ಸಂಗಮೇಶರ ಪತ್ನಿ ಪ್ರಿಯಾಂಕ್‌ ಹೇಳಿದ್ದಾರೆ.

ನಗರ ಪೊಲೀಸ್‌ ಕಮೀಶ್ನರ್‌ ಆರ್‌. ಚೇತನ್‌ ಸ್ಥಳಕ್ಕಾಗಮಿಸಿ ಹೊರಾಟಗಾರರ ಮನ ಒಲಿಕೆಗೆ ಮುಂದಾದರೂ ಕೂಡಾ ಯಾರೂ ಅವರ ಮಾತಿಗೆ ಸೊಪ್ಪು ಹಾಕದೆ ಧರಣಿ ಮುಂದುವರಿಸಿದಾಗ ಹೆಚ್ಚಿನ ಪೊಲೀಸ್‌ ಬಲ ಅಲ್ಲಿಗೆ ತರಿಸಲಾಗಿತ್ತು. ರಾಮ ಮಂದಿರದಿಂದ ಕೋಟನೂರ್‌ ಮಠದಾಚೆಯವರೆಗೂ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿ ಬಸ್‌ಗಳು, ಸರಕು ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿತ್ತು.

ಆರೋಪಿ ಸಂಗಮೇಶ ಪಾಟೀಲ್ ಮನೆ ಮೇಲೆ 40-50 ಜನರಿದ್ದ ಗುಂಪಿನಿಂದ ದಾಂಧಲೆ ನಡೆದ ಘಟನೆಯನ್ನು ಜಿಲ್ಲಾ ವೀರಶೈವ- ಲಿಂಗಾಯಿತ ಸಮಾಜದ ಮುಖಂಡರು ಖಂಡಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಕೈಗೆತ್ತಿಕೊಂಡಿರುವ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ವೀರಶೈವ ಲಿಂಗಾಯತ ಸಮುದಾಯ ಮಿಂಚಿನ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಗಮನ ಸೆಳೆದಿದೆ.ಕಲಬುರಗಿಯಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ: ಜಾಧವ್‌

ಸದರಿ ಘಟನೆಯನ್ನು ಉಗ್ರವಾಗಿ ಖಂಡಿಸಿರುವ ಬಿಜೆಪಿ ಸಂಸತ್‌ ಚುನಾವಣೆ ಅಭ್ಯರ್ಥಿ ಡಾ. ಉಮೇಶ ಜಾಧವ್‌, ಕಲಬರಗಿಯಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನಲು ಇದೇ ಘಟನೆ ಸಾಕ್ಷಿ ಎಂದಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಕೋಟನೂರ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ನಡೆದಿತ್ತು, ಈ ಘಟನೆಯನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ಆದರೆ ನಿನ್ನೆ ಬೇಲ್ ಮೇಲೆ ಬಿಡುಗಡೆಯಾದ ಆರೋಪಿ ಮನೆಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಬೇಲ್ ಮೇಲೆ ಬಿಡುಗಡೆಯಾದ ಯುವಕನ ಮನೆ ಮೇಲೆ 40-50 ಜನರು ನಿನ್ನೆ ರಾತ್ರಿ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ್ದಾರೆ. ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ ಎಂದಿದ್ದಾರೆ. ಕಳೆದ ಜ.23 ರಂದೂ ಸಹ ಕಲಬುರಗಿಯಲ್ಲಿ ವ್ಯಾಪಕ ದಾಂದಲೆ ನಡೆಸಿದ್ದರು. ಆಗಲೇ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ಇಂತಹ ಘಟನೆ ಮತ್ತೆ ಸಂಭವಿಸುತ್ತಿರಲಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ . 10-12 ದಿನಗಳಿಂದ ಜನ ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ ಎಂದಿದ್ದಾರೆ.

Share this article