ಕನ್ನಡಪ್ರಭ ವಾರ್ತೆ ಮೈಸೂರು
ಭಾರತರತ್ನ, ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಅಶೋಕಪುರಂ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದಿಂದ ಪುರಭವನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು.ಅಶೋಕಪುರಂನ ದೊಡ್ಡಗರಡಿ, ಚಿಕ್ಕಗರಡಿಯ ಪೈಲ್ವಾನರ ಬಳಗ, ಆದಿ ಕರ್ನಾಟಕ ಮಹಾ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ, ಸ್ತಬ್ಧಚಿತ್ರ, ಜಾನಪದ ಕಲಾತಂಡಗಳೊಂದಿಗೆ ಸಾವಿರಾರು ಜನ ಪಾಲ್ಗೊಂಡು, ಅಂಬೇಡ್ಕರ್ ಜಯಂತಿಯನ್ನು ಸಂಭ್ರಮಿಸಿದರು.ಅಶೋಕಪುರಂ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿರುವ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಮಂಗಳ ವಾದ್ಯಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಅಂಬೇಡ್ಕರ್ ಅವರ ವಿವಿಧ ಸ್ತಬ್ಧಚಿತ್ರಗಳು, ಭಾವಚಿತ್ರವಿರುವ ಹೂವಿನ ಮಂಟಪ, ಭಗವಾನ್ ಬುದ್ಧನ ವಿಗ್ರಹದೊಂದಿಗೆ ಮೇಲಕ್ಕೆತ್ತಿದ ಸೊಂಡಿಲು ಹೊಂದಿರುವ ಅಲಂಕರಿಸಿದ ಆನೆ, ಸಂಸತ್ತು ಕಟ್ಟಡದ ಪ್ರತಿಕೃತಿ ಪ್ರಮುಖ ಆಕರ್ಷಣೆಗಳಾಗಿದ್ದವು. ನಂತರ ಪುಷ್ಪಾಲಂಕೃತದೊಂದಿಗೆ ಕಂಗೊಳಿಸುತ್ತಿದ್ದ ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿರಿಸಿ ಪುರಭವನದವರೆಗೆ ಮೆರವಣಿಗೆ ನಡೆಸಿದರು.ಈ ಮೆರವಣಿಗೆಯು ಅಶೋಕಪುರಂನಿಂದ ಹೊರಟು ಅಶೋಕ (ಬಲ್ಲಾಳ್) ವೃತ್ತ, ಆರ್ ಟಿಒ ವೃತ್ತ, ಜೆಎಲ್ ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಮಹಾರಾಜ ಸಂಸ್ಕೃತ ಪಾಠ ಶಾಲೆ ವೃತ್ತ, ಗನ್ ಹೌಸ್ ವೃತ್ತ, ಹಾರ್ಡಿಂಜ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಚಾಮರಾಜ ವೃತ್ತದ ಮೂಲಕ ಪುರಭವನ ಆವರಣಕ್ಕೆ ತಲುಪಿತು.ಪುರಭವನ ಆವರಣದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಮೇಣದ ಬತ್ತಿ, ಅಗರಬತ್ತಿ ಬೆಳಗಿ ಭಕ್ತಿಯಿಂದ ನಮಿಸಿದರು. ಪುರುಷ ಮತ್ತು ಮಹಿಳಾ ಭಜನಾ ಮಂಡಳಿಗಳು ಭೀಮ ಗೀತೆ, ಅಂಬೇಡ್ಕರ್ ಜೀವನ ಚರಿತ್ರೆಯ ಗೀತ ಗಾಯನ ಸುಧೆ ಹರಿಸಿದರು. ಮೆರವಣಿಗೆ ಸಾಗಿದ ಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಸ್ವಾಗತ ಕೋರಲಾಯಿತು. ಯುವಕರು ಬ್ಯಾಂಡ್ ಸೆಟ್ ಹಾಡುಗಳಿಗೆ ಕುಣಿತು ಕುಪ್ಪಳಿಸಿದರು. ದಾರಿಯುದ್ದಕ್ಕೂ ಪಾನಕ ಮಜ್ಜಿಗೆ, ಕಲ್ಲಂಗಡಿ, ಸೌತೆಕಾಯಿ ವ್ಯವಸ್ಥೆ ಮಾಡಲಾಗಿತ್ತು. ಎಂಕೆಎಸ್ ನೃತ್ಯಇನ್ನೂ ಮೆರವಣಿಗೆಗೆ ಚಾಲನೆ ನೀಡಿದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು, ಅಶೋಕ ವೃತ್ತದಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದಷ್ಟು ಕಾಲ ನೃತ್ಯ ಮಾಡಿದರು .ನಂತರ ರಾಮಸ್ವಾಮಿ ವೃತ್ತದಲ್ಲಿ ಎಂ.ಕೆ. ಸೋಮಶೇಖರ್ ಅಭಿಮಾನಿಗಳ ಬಳಗದವರು ಹಮ್ಮಿಕೊಂಡಿದ್ದ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆಗೆ ಚಾಲನೆ ನೀಡಿದರು. ಚಾಮರಾಜ ಜೋಡಿ ರಸ್ತೆಯಲ್ಲಿ ಯುವಕರೊಟ್ಟಿಗೆ ಹೆಜ್ಜೆ ಹಾಕಿದರು.ಮಾಜಿ ಮೇಯರ್ ಪುರುಷೋತ್ತಮ್, ಮಾಜಿ ಉಪ ಮೇಯರ್ ಸಿದ್ದರಾಜು, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಸಿದ್ದರಾಜು, ದೊಡ್ಡಗರಡಿ ಅಧ್ಯಕ್ಷ ಜೋಗಿ ಮಹೇಶ್, ಚಿಕ್ಕಗರಡಿ ಅಧ್ಯಕ್ಷ ನಾಗರಾಜು ಬಿಲ್ಲಯ್ಯ, ನಗರ ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಮುಖಂಡರಾದ ವಿ. ರಾಮಸ್ವಾಮಿ, ವಾಸು, ರಾಜು, ರಾಘವೇಂದ್ರ, ಮಹಾಜನ್, ಶ್ರೀಧರ್, ಮಂಜುನಾಥ್, ಜೈರಾಜ್, ಮಧುರಾಜ್, ಮಹ್ಮದ್ ಫಾರೂಖ್, ಗೋವಿಂದರಾಜು, ಎಂ.ಕೆ. ಶಂಕರ್, ವಿಶ್ವನಾಥ್, ನಾಗರಾಜು, ಸುಪ್ರಿಯಾ ಮಹದೇವು, ಮಯೂರ್, ಯಶವಂತ್ ಮೊದಲಾದವರು ಇದ್ದರು.