ಸಂವಿಧಾನವನ್ನು ಓದಿ ಅರ್ಥೈಸಿಕೊಂಡಾಗ ಅಂಬೇಡ್ಕರ್ ಸಾಧನೆ ತಿಳಿಯಬಹುದು: ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Apr 16, 2025, 12:36 AM IST
15ಕೆಎಂಎನ್ ಡಿ21 | Kannada Prabha

ಸಾರಾಂಶ

ಪವಿತ್ರ ಗ್ರಂಥ ಸಂವಿಧಾನವನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ನಿಜವಾದ ಸಾಧನೆ ತಿಳಿದುಕೊಳ್ಳಬಹುದು. ಅಂಬೇಡ್ಕರ್‌ ಸ್ವಾರ್ಥಕ್ಕಾಗಿ ಯಾವುದನ್ನು ಬಯಸಲಿಲ್ಲ. ತನ್ನ ಮನೆತನವನ್ನು ಬೆಳಗಿಸಿಲ್ಲ. ತಮ್ಮ ತ್ಯಾಗವನ್ನು ಸಂವಿಧಾನ ಬರೆಯುವುದರ ಮೂಲಕ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪವಿತ್ರ ಗ್ರಂಥ ಸಂವಿಧಾನವನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ನಿಜವಾದ ಸಾಧನೆ ತಿಳಿದುಕೊಳ್ಳಬಹುದು ಎಂದು ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಂದಾಯ ಇಲಾಖೆಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್‌ರವರ 134ನೇ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್‌ ಸ್ವಾರ್ಥಕ್ಕಾಗಿ ಯಾವುದನ್ನು ಬಯಸಲಿಲ್ಲ. ತನ್ನ ಮನೆತನವನ್ನು ಬೆಳಗಿಸಿಲ್ಲ. ತಮ್ಮ ತ್ಯಾಗವನ್ನು ಸಂವಿಧಾನ ಬರೆಯುವುದರ ಮೂಲಕ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ವೀರ ಸರ್ವಕರ್ ಎನ್ನುವ ಸತ್ಯವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್‌ ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಪ್ರೇಮ್‌ಕುಮಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಭಾರತದಲ್ಲಿ ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅಂಬೇಡ್ಕರ್ ಈ ದೇಶದ ಸ್ವತ್ತು ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ವಿವರಿಸಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪಿ.ಎಂ.ನರೇಂದ್ರಸ್ವಾಮಿ ಮಾಲಾರ್ಪಣೆ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ಭವನದವರೆಗೆ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಜಾನಪದ ಕಲಾ ಮೇಳದೊಂದಿಗೆ ನಡೆಯಿತು.

ಹುಣಸೂರಿನ ಪಿ.ಕೆ.ಕೇಶವಮೂರ್ತಿ ಸಂಗ್ರಹಿಸಿದ ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ ಬಳಕೆ ಬಂದ ಪಂಚ್ಮಾರ್ಕ್, ನಾಣ್ಯಗಳು, ಗ್ರೀಕ್, ರೋಮನ್ ಕುಷಾನರು, ಶಾತವಾಹನ, ಮೈಸೂರು, ಗ್ವಾಲಿಯರ್, ಮೇವಾರದ ನಾಣ್ಯಗಳು, ಅಲ್ಲದೇ ಹಲವು ಸಂದರ್ಭದಲ್ಲಿ ಸ್ಮರಣಾರ್ಥ ಬಿಡುಗಡೆಯಾಗಿರುವ ವಿವಿಧ ಮುಖಬೆಲೆಯ ನೋಟುಗಳು, ನೂರಾರು ದೇಶ-ವಿದೇಶಗಳ ವೈವಿಧ್ಯಯಮ ನಾಣ್ಯ ಮತ್ತು ನೋಟುಗಳು ಹಾಗೂ ತಾಮ್ರ, ಬೆಳ್ಳಿ, ಚಿನ್ನ, ಸೀಸ, ಹಿತ್ತಾಳೆ ಲೋಹಗಳ ನಾಣ್ಯಗಳ ಪ್ರದರ್ಶನ ಜನರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸೌಹಾರ್ದ ನಾಗರಿಕ ವೇದಿಕೆಯಿಂದ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ಧ್ಯೇಯದೊಂದಿಗೆ ಪ್ಲಾಸ್ಟಿಕ್ ಬದಲಿ ಜೋಳದ ಬೆಂಡಿನಿಂದ ತಯಾರಿಸಿದ ಪ್ಲಾಸ್ಟಿಕ್ ಚೀಲ ಬಳಸುವ ಅಭಿಯಾನಕ್ಕೆ ಶಾಸಕರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಡಿವೈಎಸ್ಪಿ ವಿ.ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಬಿಇಒ ವಿ.ಈ.ಉಮಾ, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಸಿಪಿಐಗಳಾದ ಬಿ.ಜಿ.ಮಹೇಶ್, ಬಿ.ಎಸ್.ಶ್ರೀಧರ್, ಎಂ.ರವಿಕುಮಾರ್, ಯುವ ಮುಖಂಡ ಯುವರಾಜ್, ಮನ್ ಆರ್.ಎನ್.ವಿಶ್ವಾಸ್, ಟಿ.ಸಿ.ಚೌಡಯ್ಯ, ಪಿ.ಮಾದೇಶ್, ಎಂ.ಎನ್.ಶಿವಸ್ವಾಮಿ, ಪ್ರಮೀಳಾ, ನೂರುಲ್ಲಾ, ಸಿ.ಪಿ.ರಾಜು, ದೊಡ್ಡಯ್ಯ, ಸುಷ್ಮಾ ರಾಜು, ಸುಜಾತಾ ಕೆ.ಎಂ.ಪುಟ್ಟು, ಪ್ರಭುಲಿಂಗು, ಸಿ.ಮಾಧು, ಎಚ್.ನಾಗೇಶ್, ಎಚ್.ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ