ವಿದ್ಯುತ್ ಗುತ್ತಿಗೆ ನೌಕರರ ಕಾಯಂಗೆ ಒತ್ತಾಯ

KannadaprabhaNewsNetwork |  
Published : Apr 16, 2025, 12:36 AM IST
ಬಳ್ಳಾರಿಯಲ್ಲಿ ಜರುಗಿದ ವಿದ್ಯುತ್ ಗುತ್ತಿಗೆ ನೌಕರರ ಸಮಾವೇಶದಲ್ಲಿ ಕೆ.ಪಿ.ಟಿ.ಸಿ.ಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ತಿರುಮಲ್ ರಾವ್ ಅವರು ಮಾತನಾಡಿದರು.  | Kannada Prabha

ಸಾರಾಂಶ

ವಿದ್ಯುತ್ ಗುತ್ತಿಗೆ ನೌಕರರನ್ನ ಖಾಯಂಗೊಳಿಸಬೇಕೆಂಬ ಬೆಂಗಳೂರಿನ ಕಾರ್ಮಿಕ ನ್ಯಾಯಾಲಯದ ತೀರ್ಪಿಗೂ ಸರ್ಕಾರ ಯಾವುದೇ ಬೆಲೆ ನೀಡಿಲ್ಲ

ವಿದ್ಯುತ್ ಗುತ್ತಿಗೆ ನೌಕರರ ಸಮಾವೇಶ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಂಜೂರಾದ ಹುದ್ದೆಗಳಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಸಾವಿರಾರು ವಿದ್ಯುತ್ ಗುತ್ತಿಗೆ ನೌಕರರನ್ನು ಈವರೆಗಿನ ರಾಜ್ಯ ಸರ್ಕಾರಗಳು ಕಾಯಂಗೊಳಿಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಮಂಜೂರಾದ ಖಾಯಂ ಹುದ್ದೆಗಳಲ್ಲಿ ಕೆಲಸ ಮಾಡುವ ಇವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕೂಡ ನೀಡುತ್ತಿಲ್ಲ. ವಿದ್ಯುತ್ ಗುತ್ತಿಗೆ ನೌಕರರನ್ನ ಖಾಯಂಗೊಳಿಸಬೇಕೆಂಬ ಬೆಂಗಳೂರಿನ ಕಾರ್ಮಿಕ ನ್ಯಾಯಾಲಯದ ತೀರ್ಪಿಗೂ ಸರ್ಕಾರ ಯಾವುದೇ ಬೆಲೆ ನೀಡಿಲ್ಲ ಎಂದು ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ತಿರುಮಲ್ ರಾವ್ ತಿಳಿಸಿದರು.

ನಗರದ ಎಐಟಿಯುಸಿ ಕಚೇರಿ ಸಭಾಂಗಣದಲ್ಲಿ ಜರುಗಿದ ವಿದ್ಯುತ್ ಗುತ್ತಿಗೆ ನೌಕರರ ಸಮಾವೇಶದಲ್ಲಿ ಮಾತನಾಡಿದರು.

ಪ್ರಸ್ತುತ ನೌಕರರು, ಗುತ್ತಿಗೆದಾರರಿಂದ ನಿರಂತರ ವಂಚನೆಗೆ ಒಳಗಾಗಿದ್ದು ಕನಿಷ್ಠ ವೇತನ, ಪಿಎಫ್, ಇಎಸ್‌ಐ, ರಜೆ ಇಂತಹ ಕಾನೂನಾತ್ಮಕ ಸೌಲಭ್ಯಗಳು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಗುತ್ತಿಗೆದಾರರಿಂದ ಕಿರುಕುಳ ತಪ್ಪಿಸಲು ವಿವಿಧೋದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಜಿಲ್ಲಾಡಳಿತವು ಆಸಕ್ತಿ ತೋರಿಸುತ್ತಿದ್ದರೂ, ಇದಕ್ಕೆ ಪೂರಕವಾಗಿ ಕೆಪಿಟಿಸಿಎಲ್ ಇಲಾಖೆಯಿಂದ ತ್ವರಿತವಾಗಿ ಕೆಲಸ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಗುತ್ತಿಗೆ ನೌಕರರು ಸಂಘಟಿತರಾಗಿ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸುವ ಅವಶ್ಯಕತೆಯಿದೆ. ಸರಿಯಾದ ನಾಯಕತ್ವದಡಿಯಲ್ಲಿ ನಿರಂತರ ಹೋರಾಟ ಹಾಗೂ ಒಗ್ಗಟ್ಟು ಕಾಯ್ದುಕೊಳ್ಳುವುದೇ ಪರಿಹಾರವಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಎ.ದೇವದಾಸ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಗುತ್ತಿಗೆ ನೌಕರರು ಹಾಗೂ ಸಂಘಟನಾಕಾರ ಕಿರಣ್ ಎಂ.ಸಿ. ಮಾತನಾಡಿದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್, ಉಪಾಧ್ಯಕ್ಷೆ ಎ. ಶಾಂತಾ, ಮುಖಂಡರಾದ ಮೋದಿನ್ ಬಾಷಾ, ರಾಘವೇಂದ್ರ ಮತ್ತಿತರರಿದ್ದರು. ಸಮಾವೇಶದ ಕೊನೆಯಲ್ಲಿ ನೂತನ ಸಂಘದ ಜಿಲ್ಲಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಡಾ. ಪ್ರಮೋದ್, ಕಾರ್ಯದರ್ಶಿಯಾಗಿ ಕಿರಣ್ ಎಂ.ಸಿ., ಉಪಾಧ್ಯಕ್ಷರಾಗಿ ರಾಘವೇಂದ್ರ, ಮೋದಿನ್ ಬಾಷಾ, ಜಂಟಿ ಕಾರ್ಯದರ್ಶಿಯಾಗಿ ಸುರೇಶ್ ಆಯ್ಕೆಗೊಂಡರು.

ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೂ ಒಳಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕನಿಷ್ಠ ವೇತನ, ಪಿಎಫ್, ಇಎಸ್‌ಐ, ಬೋನಸ್, ರಜೆ, ಪೇಮೆಂಟ್ ಸ್ಲಿಪ್ ಮುಂತಾದ ಶಾಸನಬದ್ಧ ಸೌಲಭ್ಯಗಳನ್ನು ಖಾತ್ರಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಕುರಿತು ಸಮಾವೇಶ ನಿರ್ಣಯ ಕೈಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ