ಚಿತ್ರದುರ್ಗ : ನಾನು ಅಂಬೇಡ್ಕರ್ ಆಗಲು ಯಾವತ್ತೂ ಸಾಧ್ಯವಿಲ್ಲ. ಆದರೆ ಅಂಬೇಡ್ಕರ್ ಆಶಯ ಮತ್ತು ನಿಲುವುಗಳೇ ನನ್ನ ನಿಲುವುಗಳು ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗದಲ್ಲಿ ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಶ್ರಮಿಕ ಸಂಸ್ಕೃತಿ ಮಕ್ಕಳಿಗೆ ಸನ್ಮಾನಿಸಿ ಮಾತನಾಡಿ, ಅಂಬೇಡ್ಕರ್ ಆಶಯಗಳ ಕಾರಣಕ್ಕೆ ಶೋಷಿತ ಸಮುದಾಯಗಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಾಲು ಪಡೆಯಲು ಸಾಧ್ಯವಾಗಿದೆ ಎಂದರು.
ಪ್ರತಿಭೆ ಯಾವುದೇ ಒಂದು ಜಾತಿ-ಸಮುದಾಯದ ಸ್ವತ್ತಲ್ಲ. ಹಿಂದೆ ಚತುವರ್ಣ ವ್ಯವಸ್ಥೆಯಲ್ಲಿ ಮೇಲಿನವರಿಗೆ ಮಾತ್ರ ಎಲ್ಲಾ ಅವಕಾಶಗಳು ಸಿಗುತ್ತದೆ. ಶೂದ್ರರು, ಶೋಷಿತರು, ಪರಿಶಿಷ್ಠ ಜಾತಿಗಳವರು ಮತ್ತು ಮೇಲ್ಜಾತಿ ಮಹಿಳೆಯರೂ ಕೂಡ ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಈ ಪರಿಸ್ಥಿತಿ ಬದಲಾಗಿದೆ ಎಂದರು.
ಶಿಕ್ಷಣ ಸ್ವಾಭಿಮಾನ ಬೆಳೆಸುತ್ತದೆ. ವೈಜ್ಞಾನಿಕ ಮತ್ತು ವೈಚಾರಿಕವಾದ ಶಿಕ್ಷಣ ಅಗತ್ಯ. ಹಣೆಬರಹ, ಗ್ರಹಚಾರ ಎನ್ನುವ ಮೌಢ್ಯವನ್ನು ವಿದ್ಯಾವಂತರೇ ನಂಬುತ್ತಾರೆ. ಇಂಥಾ ಶಿಕ್ಷಣ ಪಡೆದು ಪ್ರಯೋಜನ ಏನು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಕುವೆಂಪು ಅವರ ಆಶಯದ ವೈಚಾರಿಕ ಶಿಕ್ಷಣ ಅಗತ್ಯ. ಯಾವ ವ್ಯವಸ್ಥೆಯಲ್ಲಿ ಚಲನೆ ಇರುವುದಿಲ್ಲವೋ ಆ ಸಮಾಜದಲ್ಲಿ ಪ್ರಗತಿ ಸಾಧ್ಯವಿಲ್ಲ. ಮಾದಿಗ ಸಮುದಾಯದ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಗಳಿಸಿ ಸನ್ಮಾನಿತರಾಗುತ್ತಿರುವುದು ಸಂತಸದ ಸಂಗತಿ ಎಂದರು. ಈ ಸಂದರ್ಭದಲ್ಲಿ ಶೇ.98 ರಷ್ಟು ಅಂಕ ಪಡೆದು ರಾಜ್ಯಕ್ಕೆ 8ನೇ ರ್‍ಯಾಂಕ್ ಗಳಿಸಿದ ಸನ್ಮಾನಿತ ಪಿಯುಸಿ ವಿದ್ಯಾರ್ಥಿನಿಯೊಬ್ಬರಿಗೆ, ನೀನು ಐಎಎಸ್ ಮಾಡು, ಬೇಕಾದ ಎಲ್ಲಾ ಸಹಾಯ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಕತ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಮಾಜ ಕಲ್ಯಾಣ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ವೀರೇಂದ್ರ ಪಪ್ಪಿ, ರಘುಮೂರ್ತಿ, ಬಸವಂತಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಇದ್ದರು.