ಬಳ್ಳಾರಿ: ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಸ್ತ್ರಗಳ ಮೂಲಕ ತಮ್ಮ ಜೀವನ ಮೌಲ್ಯಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಬಾಬಾಸಾಹೇಬರು ತಮ್ಮ ಸಾರ್ಥಕ ಬದುಕನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಚಲುವರಾಜು ಹೇಳಿದರು.
ಬಾಬಾಸಾಹೇಬರ ಜ್ಞಾನ ಮತ್ತು ಸಾಮಾಜಿಕ ಸೇವೆಯ ತುಡಿತಗಳನ್ನು ಪಾರಂಪರಿಕ ಶಿಕ್ಷಣ ವ್ಯವಸ್ಥೆಯ ಹೊರತಾಗಿ ಸಮಾಜಮುಖಿ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಅಧ್ಯಯನ ಪೀಠಗಳು ಮುಂದಾಗಬೇಕಿದೆ ಎಂದರು.
ಶೋಷಿತ ಸಮುದಾಯಕ್ಕೆ ಶಿಕ್ಷಣ ಒದಗಿಸುವ ಕನಸು ನನಸಾಗಲಿಲ್ಲ ಎಂಬ ಕೊರಗಿನಿಂದಲೇ ಬಾಬಾಸಾಹೇಬರು ಕೊನೆಯುಸಿರೆಳೆದರು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆಯಂತಹ ಶಿಕ್ಷಣದ ಹರಿಕಾರರನ್ನು ಅಂಬೇಡ್ಕರ್ ಆದರ್ಶವನ್ನಾಗಿಸಿಕೊಂಡು ಅನೇಕ ಕಷ್ಟಗಳನ್ನು ಎದುರಿಸಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಹಕ್ಕುಗಳ ವಂಚಿತ ತಳ ಸಮುದಾಯಗಳು ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಸಮುದಾಯವನ್ನು ಬಲಪಡಿಸಬೇಕು ಎಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು. ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳನ್ನು ವೈಚಾರಿಕತೆಗೆ ಒಳಪಡಿಸಿ ಆಳವಾದ ಸಂಶೋಧನೆಯ ಮೂಲಕ ಪ್ರಸ್ತುತ ಸಮಾಜಕ್ಕೆ ಮಾದರಿಯಾಗುವ ಅಂಶಗಳನ್ನು ಕಂಡುಕೊಳ್ಳುವ ಕೆಲಸ ಅಧ್ಯಯನ ಪೀಠಗಳ ಮೂಲಕ ನಡೆಯಬೇಕು ಎಂದು ತಿಳಿಸಿದರು.ಅತಿಥಿಗಳಾಗಿ ವೇದಿಕೆಯಲ್ಲಿದ್ದ ವಿವಿಯ ಸಿಂಡಿಕೇಟ್ ಸದಸ್ಯೆ ಡಾ. ಜಯಲಕ್ಷ್ಮಿನಾಯಕ ಅವರು ಮಾತನಾಡಿದರು.
ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂಬೇಡ್ಕರ್ ಸ್ವೀಕರಿಸಿದ್ದ ಬೌದ್ಧ ಧರ್ಮದ ಬುದ್ಧಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಇದಕ್ಕೂ ಮೊದಲು ವಿವಿ ಆವರಣದಲ್ಲಿರುವ ಬಾಬಾಸಾಹೇಬರ ಕಂಚಿನ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಿಸಲಾಯಿತು.
ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ.ಎನ್.ಎಂ. ಸಾಲಿ, ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕಿ ಡಾ.ಗೌರಿ ಮಾಣಿಕ ಮಾನಸ ಸಮಾರಂಭದಲ್ಲಿ ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ ಶಶಿಧರ ಕೆಲ್ಲೂರ್ ನಿರೂಪಿಸಿ, ವಂದಿಸಿದರು.
ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.