ನರಗುಂದ: ತಮ್ಮನಿಗೆ ನಿಶ್ಚಯಿಸಲಾಗಿದ್ದ ಕನ್ಯೆಗಾಗಿ ಆಸೆಪಟ್ಟಿದ ಅಣ್ಣನೊಬ್ಬ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಮಂಗಳವಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ಕುರಿಗಾಹಿ ಫಕೀರಪ್ಪ ಕುರವಿನಕೊಪ್ಪ (19) ಎಂಬಾತ ಕೊಲೆಯಾದ ಯುವಕ. ಇವನ ಅಣ್ಣ ಅಶೋಕ ಕುರವಿನಕೊಪ್ಪ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಆರೋಪಿ.ಆದರೆ ಕೊಲೆ ಆರೋಪಿ ಪೊಲೀಸರಿಗೆ ಕರೆ ಮಾಡಿ, ಯಾರೋ ದುಷ್ಕರ್ಮಿಗಳು ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಘಟನೆಯಿಂದ ಪಾರಾಗಲು ಯತ್ನಿಸಿದ್ದ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಅಶೋಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಆಗ ಹುಡುಗಿ ವಿಷಯವಾಗಿ ಫಕ್ಕೀರಪ್ಪ ಹಾಗೂ ಅಶೋಕನ ನಡುವೆ ಗಲಾಟೆಯಾಗಿದ್ದು, ಕೊಲೆ ಮಾಡಿದರೆ ಆ ಹುಡುಗಿ ನನಗೆ ಸಿಗ್ತಾಳೆ ಎಂದು ಕೃತ್ಯವನ್ನು ಆರೋಪಿ ಅಶೋಕ ಒಪ್ಪಿಕೊಂಡಿದ್ದಾನೆ. ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತನ ತಾಯಿಯ ಹೇಳಿಕೆ: ತನ್ನ ಇಬ್ಬರು ಮಕ್ಕಳು ಹಲವು ವರ್ಷಗಳಿಂದ ಕುರಿ ಮೇಯಿಸುತ್ತಿದ್ದರು. ಇಬ್ಬರ ನಡುವೆ ಜಗಳ ಇರಲಿಲ್ಲ. ಇತ್ತೀಚೆಗೆ ಅಶೋಕನಿಗೆ ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಆದರೆ ಹಿರಿಯರು ಹುಡುಕಿದ್ದ ಕನ್ಯೆ ಅಶೋಕನಿಗೆ ಇಷ್ಟ ಇರಲಿಲ್ಲ. ಫಕೀರಪ್ಪನಿಗೆ ಹುಡುಕಿದ್ದ ಕನ್ಯೆ ಮೇಲೆ ಅಶೋಕ ಆಸೆ ಪಟ್ಟಿದ್ದ. ಆದರೆ ಅಶೋಕ ತಮ್ಮನನ್ನೇ ಕೊಲೆ ಮಾಡ್ತಾನೆ ಅಂದುಕೊಂಡಿರಲಿಲ್ಲ ಎಂದು ತಾಯಿ ಯಲ್ಲಮ್ಮ ಕುರವಿನಕೊಪ್ಪ ನೊಂದು ನುಡಿದರು.ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದೇವೆ ಎಂದು ಸಿಪಿಐ ಮಂಜುನಾಥ ನಡುವಿನಮನಿ ತಿಳಿಸಿದರು.