ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಬಿಎ ಮುಖ್ಯಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ನಮೂನೆಗಳನ್ನು ಮತದಾರರು ತ್ವರಿತವಾಗಿ ಸಲ್ಲಿಸುವಂತೆ ಮನವಿ
ಜಿಬಿಎ ಕೇಂದ್ರ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಗುರುವಾರ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜೂ.30ರಿಂದ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುತ್ತಿದ್ದು, ಭರ್ತಿ ಮಾಡಿದ ನಮೂನೆಗಳನ್ನು ಮತದಾರರು ತ್ವರಿತವಾಗಿ ಸಲ್ಲಿಸುವಂತೆ ಮನವಿ ಮಾಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಆ.8ರವರೆಗೆ ಭರ್ತಿ ಮಾಡಿರುವ ಗಣತಿ ನಮೂನೆ ಸಲ್ಲಿಸಲು ಅವಕಾಶವಿದ್ದು, ಆ.8ರ ಒಳಗಾಗಿ ಬಾಕಿ ನಮೂನೆ ಸಲ್ಲಿಸುವಂತೆ ತಿಳಿಸಿದರು. ಆ.17 ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ, ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ತಮ್ಮ ಹೆಸರು ಸೇರ್ಪಡೆಗಾಗಿ ಹಕ್ಕು ಮತ್ತು ಆಕ್ಷೇಪಣೆ ಪ್ರಕ್ರಿಯೆಯಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ನಮೂನೆ ಸಲ್ಲಿಕೆ ಅವಧಿ ವಿಸ್ತರಣೆಗೆ ಮನವಿ:
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಇನ್ನೂ ಕೆಲವು ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಂಗ್ರಹಿಸಬೇಕಿರುವ ಹಿನ್ನೆಲೆಯಲ್ಲಿ, ನಮೂನೆಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಅವಧಿ ವಿಸ್ತರಿಸುವಂತೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿದರು. ಈ ಕುರಿತು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು. ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ನಗರ ಪಾಲಿಕೆ ಆಯುಕ್ತರಾದ ಜಿ., ಪೊಮ್ಮಲ್ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಗದೀಶ್, ಜಗದೀಶ್ ನಾಯ್ಕ್ ಇದ್ದರು.
