ಡಾ. ಅಂಬೇಡ್ಕರ್ ಅವರ ಬಗ್ಗೆ ಅಪಾರವಾದ ಗೌರವ, ಅಭಿಮಾನವಿದ್ದು ಕಿಂಚಿತ್ತು ಅವರ ಹೆಸರಿಗೆ ಚ್ಯುತಿ ಬಾರದಂತೆ ನೆಡೆದುಕೊಳ್ಳುವುದು ತಮ್ಮ ಕರ್ತವ್ಯ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು. ಶಾಸಕರು ಹಾಲ್ತೊರೆ ಗ್ರಾಮದ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮಕ್ಕೆ ಬಂದು ಬಾಬಾಸಾಹೇಬ್ ಆಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮ್ಮಲ್ಲಿದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದ್ದಾರೆ ಎಂದು ಮಾದಿಗ ದಂಡೊರ ಸಮಿತಿಯ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರು ಈ ದೇಶಕ್ಕೆ ಡಾ.ಬಿ.ಆರ್.ಆಂಬೇಡ್ಕರ್ ಕೊಟ್ಟಿರುವಂತ ಸಂವಿಧಾನದಡಿಯಲ್ಲಿ ನಾನು ಶಾಸಕನಾಗಿದ್ದೇನೆ. ಅವರ ಬಗ್ಗೆ ಅಪಾರವಾದ ಗೌರವ, ಅಭಿಮಾನವಿದ್ದು ಕಿಂಚಿತ್ತು ಅವರ ಹೆಸರಿಗೆ ಚ್ಯುತಿ ಬಾರದಂತೆ ನೆಡೆದುಕೊಳ್ಳುವುದು ತಮ್ಮ ಕರ್ತವ್ಯ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಮಾದೀಹಳ್ಳಿ ಹೋಬಳಿ ಹಾಲ್ತೋರೆ ಕೊಪ್ಪಲು ಗ್ರಾಮದಲ್ಲಿ ಡಾ.ಬಿ.ಆರ್.ಆಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ನಾನೊಬ್ಬ ಸಾಮಾನ್ಯ ರೈತನ ಮಗನಾಗಿದ್ದು ಇಂದು ಶಾಸಕನಾಗಲು ಸಂವಿದಾನದ ಮೂಲ ತತ್ವ ಸಿದ್ಧಾಂತಗಳು ಕಾರಣವಾಗಿದೆ. ನಾನು ಅವುಗಳನ್ನು ಮೊದಲಿನಿಂದಲೂ ಗೌರವಿಸುತ್ತ ಬಂದಿದ್ದೇನೆ. ಆದರೆ ಕೆಲವೇ ದಿನಗಳ ಹಿಂದೆ ಇದೇ ಗ್ರಾಮದಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಾಣದ ವಿಚಾರದಲ್ಲಿ ಗೊಂದಲ ಉಂಟಾಗಿ ವೃತ್ತನಿರೀಕ್ಷಕರು ಕರೆ ಮಾಡಿದಾಗ ಪಕ್ಕದಲ್ಲಿ ಆಂಬೇಡ್ಕರ್ ಪುತ್ಥಳಿ ಇದೆ ಅಲ್ವ ಎಂದಷ್ಟೆ ಕೇಳಿದ್ದೆ ಕಾರಣ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಆಂಬೇಡ್ಕರ್ ಪುತ್ಥಳಿಗೆ ಹಾನಿ ಉಂಟಾಗುವಂತ ಸನ್ನಿವೇಶಗಳು ಸೃಷ್ಠಿಯಾಗಬಾರದು ಎಂಬ ಕಾರಣದಿಂದಷ್ಟೆ ಹೇಳಿದ್ದೆ. ಆದರೆ ಅದನ್ನೆ ಕೆಲವು ಕಾಣದ ಕೈಗಳು ನನ್ನ ಫೋನ್ ಸಂಭಾಷಣೆಯನ್ನೆ ತಿರುಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರು. ಆದರೆ ಮಾದೀಗ ದಂಡೋರ ಅಧ್ಯಕ್ಷರು ಗ್ರಾಮಕ್ಕೆ ಬಂದು ವಾಸ್ತವಾಂಶವನ್ನು ಕೇಳಿ ತಿಳಿದುಕೊಂಡಿದ್ದರಿಂದ ನಿಜಾಂಶ ಬೆಳಕಿಗೆ ಬಂದಿದ್ದು, ಮೊಸರಲ್ಲಿ ಕಲ್ಲು ಹುಡುಕುವ ವಿರೋಧಿಗಳಿಗೆ ನಿರಾಸೆಯಾಗಿದೆ ಎಂದರು. ಆಂಬೇಡ್ಕರ್‌ರವರ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸವಲತ್ತುಗಳು ತಲುಪುಬೇಕು ಎಂದು ತಾಲೂಕಿನಲ್ಲಿ ಒಂದು ಸಣ್ಣ ಸಮಸ್ಯೆಯಾಗದಂತೆ ಎಲ್ಲ ವರ್ಗದ ಜನರಿಗೆ ಅನುದಾನಗಳನ್ನು ಹಂಚುತ್ತಿದ್ದೇನೆ ಎಂದರು.
ಮಾಲಾರ್ಪಣೆ ಮಾಡಿ ಮಾತನಾಡಿದ ಮಾದಿಗ ದಂಡೊರ ಸಮಿತಿಯ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಶಾಸಕರು ಹಾಲ್ತೊರೆ ಗ್ರಾಮದ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮಕ್ಕೆ ಬಂದು ಬಾಬಸಾಹೇಬ್ ಆಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮ್ಮಲ್ಲಿದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದ್ದಾರೆ, ಜಿಲ್ಲೆಯಲ್ಲೆ ಇದೊಂದು ಮಾದರಿ ಎನ್ನಬಹುದು, ತನ್ನ ಮೇಲೆ ಅಪವಾದಗಳು ಬಂದಾಗ ಮೂಗುಮುರಿಯುವ ಜನಪ್ರತಿನಿಧಿಗಳ ಮಧ್ಯೆ ಸ್ಥಳಕ್ಕೆ ನಮ್ಮನ್ನು ಕರೆಸಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ತಾನು ಒಬ್ಬ ಹಿಂದುಳಿದ ವರ್ಗದ ಜನರ ಬೆಂಬಲಕ್ಕೆ ಇದ್ದೇನೆ, ಯಾವುದೇ ಅಪವಾದಗಳಿಗೆ ಮನ್ನಣೆ ನೀಡಬಾರದು ಎಂದು ತಿಳಿಸಿಕೊಟ್ಟ ಮೊದಲ ಶಾಸಕ ಎಚ್.ಕೆ.ಸುರೇಶ್ ಆಗಿದ್ದು ಇವರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಮಾದರಿ ಎಂದ ಅವರು ಈ ಗ್ರಾಮದಲ್ಲಿ ಪುನಿತ್ ರಾಜ್‌ಕುಮಾರ್ ಪ್ರತಿಮೆ ನಿರ್ಮಾಣಕ್ಕೆ ನಮ್ಮ ಬೆಂಬಲ ಸಹ ಇದೆ ಎಂದರು.
ಸ್ಥಳದಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷ ಡಿಶಾಂತ್ ಕುಮಾರ್, ಜೆಡಿಎಸ್ ಹೋಬಳಿ ಅಧ್ಯಕ್ಷ ಆನಂದ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರವೀಶ್ ಬಸವಾಪುರ, ಹಗರೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಂಜುನಾಥ್, ಛಲವಾದಿ ಪುಟ್ಟರಾಜು, ಹುಲುಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲ, ಸದಸ್ಯ ಪ್ರಕಾಶ್, ಹುಲುಗುಂಡಿ ಗೋಪಿ, ಹಾಲ್ತೋರೆ ಗ್ರಾಮದ ಮೋಹನ್ ಇನ್ನಿತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.