ಕೊಪ್ಪಳ:
ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ನೆಮ್ಮದಿಯಿಂದ, ಎಲ್ಲ ಜಾತಿ-ಜನಾಂಗವರು ಜತೆಯಾಗಿದ್ದೇವೆ ಎಂದು ಅದಕ್ಕೆ ಅಂಬೇಡ್ಕರ್ ಕಾರಣವಾಗಿದ್ದು ಸರ್ವರಿಗೂ ಶಕ್ತಿಯಾಗಿದ್ದಾರೆ. ಅವರ ಆಶೀರ್ವಾದದಿಂದ ಇಂದು ನಾನು ಸಚಿವನಾಗಿ ಈ ವೇದಿಕೆ ಮೇಲೆ ನಿಲ್ಲಲು ಸಾಧ್ಯವಾಗಿದೆ. ಸಂವಿಧಾನದಲ್ಲಿ ಸರ್ವರಿಗೂ ಸಮಾನ ಹಕ್ಕು ನೀಡಿದ್ದು ಮಹಿಳೆಯರಿಗೂ ಸಮಾನ ಅವಕಾಶ ಮತ್ತು ಚುನಾವಣೆಗೆ ಸ್ಪರ್ಧಿಸಲು ಮೀಸಲಾತಿ ಕಲ್ಪಿಸಿಕೊಟ್ಟಿದ್ದಾರೆ ಎಂದರು.ಅಂಬೇಡ್ಕರ್ ಸೇರಿದಂತೆ ಮಹಾನ ನಾಯಕರನ್ನು ಒಂದು ಜಾತಿ-ಜನಾಂಗಕ್ಕೆ ಸೀಮಿತ ಮಾಡಬಾರದು. ಅವರು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಪ್ರತಿ ಶಾಲಾ-ಕಾಲೇಜಿನಲ್ಲಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಇದರ ಮೂಲಕ ಸಂವಿಧಾನದ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಅಂಬೇಡ್ಕರ್ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಹಿಂದುಳಿದವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಬದುಕು ಕಟ್ಟಿಕೊಳ್ಳಲು ಅವರು ರಚಿಸಿದ ಸಂವಿಧಾನವು ನಮಗೆ ಒಂದು ಶಕ್ತಿಯಾಗಿದೆ. ಅಂಬೇಡ್ಕರ್ ಎಂದರೇ, ಒಂದು ಚಳವಳಿ, ಸಮಾನತೆ. ಸಮಾನತೆಯ ಬದುಕು ಕಟ್ಟಿಕೊಟ್ಟವರು. ಅವರು ಎಲ್ಲ ವರ್ಗದವರಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ನೀಡಿದ್ದಾರೆ ಎಂದರು.
ಸನ್ಮಾನ:
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಎಸ್ಪಿ ಡಾ. ರಾಮ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ಮಹೇಂದ್ರ ಛೋಪ್ರಾ, ಗುರುರಾಜ ಹಲಗೇರಿ, ರಾಜಶೇಖರ ಆಡೂರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಮುಖಂಡರಾದ ಗಾಳೆಪ್ಪ ಪೂಜಾರ, ಗೂಳಪ್ಪ ಹಲಗೇರಿ, ಡಾ. ಜ್ಞಾನಸುಂದರ, ಗವಿಸಿದ್ದಪ್ಪ ಕಂದಾರಿ, ಸಿದ್ದೇಶ ಪೂಜಾರ, ರಾಮಣ್ಣ ಕಂದಾರಿ, ಯಲ್ಲಪ್ಪ ಬಳಗನೂರ, ಗವಿಸಿದ್ದಪ್ಪ ಬೆಲ್ಲದ್, ಕೃಷ್ಣ ಇಟ್ಟಂಗಿ, ಗಾಳೆಪ್ಪ ಕಡೆಮನಿ ಸೇರಿದಂತೆ ಸಮಾಜದ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿಮಿತ್ತ ಬೆಳಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡು ಸಾಲಾರಜಂಗ್ ರಸ್ತೆ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದ ವರೆಗೆ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ಇದರಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ, ಸಾರ್ವಜನಿಕರ ಗಮನ ಸೆಳೆದವು.