ಕನಕಪುರ: ಕಾರ್ಮಿಕ ನೀತಿಗಳನ್ನು ಜಾರಿಗೆ ತಂದು ಕಾರ್ಮಿಕರಿಗೆ ಹಕ್ಕು ಹಾಗೂ ಭದ್ರತೆ ಕಲ್ಪಿಸಿಕೊಟ್ಟವರು ಅಂಬೇಡ್ಕರ್ ಅವರು ಎಂದು ಗೌಡಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ್ ತಿಳಿಸಿದರು.
ನಗರದ ಇಂದಿರಾನಗರದ ಸಮುದಾಯ ಭವನದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ, ಅವರು ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಕಾರ್ಮಿಕ ನೀತಿಗಳನ್ನು ಜಾರಿಗೆ ತಂದು ಕಾರ್ಮಿಕರಿಗೆ ೮ ತಾಸು ಮಾತ್ರ ಕೆಲಸ, ವಾರದಲ್ಲಿ ಒಂದು ದಿನ ವೇತನ ಸಹಿತ ರಜೆ, ಮಹಿಳೆಯರಿಗೆ ವಿಶೇಷ ಭತ್ಯೆ ಕೊಡಬೇಕು, ಹೆರಿಗೆ ರಜೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಇತ್ಯಾದಿ ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸಿ ಎಲ್ಲ ವರ್ಗದ ಕಾರ್ಮಿಕರಿಗೂ ಭದ್ರತೆ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.ಕಾರ್ಮಿಕರನ್ನು ಕೀಳಾಗಿ ನೋಡುವ ವರ್ಗ ಇನ್ನೂ ಇದೆ. ಯಾವುದೇ ವೃತ್ತಿಯಾಗಲಿ ಅವರ ವೃತ್ತಿಗೆ ಅವರೇ ಶ್ರೇಷ್ಠರು. ದುಡಿಯುವವರು ಇರುವರೆಗೂ ದುಡಿಸಿಕೊಳ್ಳುವವರು ಇದ್ದೇ ಇರುತ್ತಾರೆ. ಕಾರ್ಮಿಕರು ಅವರ ರಕ್ಷಣೆ, ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಇಲಾಖೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದು ತಮ್ಮ ಕೆಲಸವನ್ನು ನಿಷ್ಠೆ ಶ್ರದ್ಧೆಯಿಂದ ಮಾಡಿದರೆ ಮುಂದೊಂದು ದಿನ ಕಾರ್ಮಿಕನೇ ಮಾಲೀಕನಾಗಲು ಸಾಧ್ಯ ಎಂದು ತಿಳಿಸಿದರು.
ನಗರದ ಅಂಬೇಡ್ಕರ್ ಕ್ರಾಂತಿ ಸೇನೆ ಅಧ್ಯಕ್ಷ ವಿ.ಬಾಬು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1931ರಲ್ಲಿ ಕಾರ್ಮಿಕರಿಗಾಗಿ ನೀತಿ ಕಾಯ್ದೆಗಳನ್ನು ಜಾರಿಗೆ ತರಲು ಲಂಡನ್ ದುಂಡುಮೇಜಿನ ಸಭೆಯಲ್ಲಿ ಮನವಿ ಮಾಡಿದ ಏಕೈಕ ವ್ಯಕ್ತಿ, ಸ್ವತಂತ್ರ ಭಾರತದಲ್ಲಿ ಕಾರ್ಮಿಕ ಕಾಯ್ದೆಗಳು ರೂಪುಗೊಳ್ಳಲು ಅಂಬೇಡ್ಕರ್ ಅವರೆ ನೇರ ಕಾರಣೀಭೂತರು ಎಂಬುದು ಹೆಮ್ಮೆಯ ವಿಷಯ. ಈ ಹಿಂದೆ ಕಾರ್ಮಿಕರನ್ನು ಕೀಳಾಗಿ ಕಂಡು ಹೆಚ್ಚು ಕಾಲ ದುಡಿಸಿಕೊಳ್ಳುವ ಪದ್ಧತಿ ಜಾರಿಯಲ್ಲಿತ್ತು. ಕಾರ್ಮಿಕರು 8 ಗಂಟೆ ಮಾತ್ರ ಕೆಲಸ ಮಾಡಬೇಕು. ವಾರದಲ್ಲಿ ಒಂದು ದಿನ ವೇತನ ಸಹಿತ ರಜೆ ಮಹಿಳಾ ಕಾರ್ಮಿಕರಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಆದರೆ ಇಂದಿಗೂ ಕಾರ್ಮಿಕರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳು ಮಾತ್ರ ನಿಂತಿಲ್ಲ. ಕಾರ್ಮಿಕರು ಸಂಘಟಿತರಾಗದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟರು.ಕಾರ್ಮಿಕರು ಒಗ್ಗಟ್ಟಾದರೆ ಆಳುವ ವರ್ಗಕ್ಕೆ ಅದು ಅಪಾಯ ಅದನ್ನರಿತು ಆಳುವ ಸರ್ಕಾರಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಈ ರೀತಿ ಗುಂಪುಗಳನ್ನಾಗಿ ಮಾಡಿ ಒಡೆದ ಆಳುತ್ತಿದ್ದು, ನೈಜ ಕಾರ್ಮಿಕರು ಇಲಾಖೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಿರಿವಂತರು ಇಲಾಖೆಯ ಸೌಲಭ್ಯ ಪಡೆಯುತ್ತಿದ್ದಾರೆ. ನಿಜವಾದ ಶ್ರಮಿಕ ವರ್ಗಕ್ಕೆ ಇಲಾಖೆ ಸೌಲಭ್ಯ ಸಿಗಬೇಕು. ಹಾಗಾಗಿ ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಭಾರತದಲ್ಲಿ ಸದೃಢ ಸಂವಿಧಾನ ಕಾನೂನುಗಳು ಇದ್ದರೂ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕಾದ ಸಂದರ್ಭವನ್ನು ಸೃಷ್ಟಿಸಿ ಸಂವಿಧಾನ ಮತ್ತು ಕಾನೂನು ಮೌಲ್ಯಗಳು ಕುಸಿಯುವಂತೆ ಮಾಡುತ್ತಿದ್ದಾರೆ. ಇತ್ತೀಚೆಗೆ ಇಬ್ಬರು ಪೌರಕಾರ್ಮಿಕರು ಮೃತಪಟ್ಟಿದ್ದರು. ಆದರೆ ಆಳುವವರು, ಅಧಿಕಾರಿ ವರ್ಗ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಕೂಡ ಮಾಡಲಿಲ್ಲ. ಕಾರ್ಮಿಕರು ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಅಂಬೇಡ್ಕರ್ ಅವರು ತಮ್ಮ ಸಂವಿಧಾನ ದ ಮೂಲಕ ಮದ್ದನ್ನು ಎರೆದಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಪ್ರತಿ ವರ್ಷ ಕಾರ್ಮಿಕರ ದಿನಾಚರಣೆಯನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಿ ಪ್ರತಿಯೊಬ್ಬರನ್ನು ಗೌರವಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಜನಾರ್ದನ್, ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಮೋಹನ್, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ರಾಜು, ಮಾತಂಗಿ ಟ್ರಸ್ಟ್ ಅಧ್ಯಕ್ಷ ಜೀವನ್, ಮುಖಂಡ ಯಂಗಯ್ಯ, ವೆಂಕಟರಮಣ, ವೆಂಕಟೇಶ್ ಇತರರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01: ಕನಕಪುರದ ಇಂದಿರಾನಗರ ಸಮುದಾಯ ಭವನದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು.