ಸಂವಿಧಾನ ಶಿಲ್ಪಿ, ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಮುಂದಿನ ವರ್ಷದಿಂದ ಮಡಿಕೇರಿ ದಸರಾ ಆಚರಣೆಯಂತೆ ಆಚರಿಸಲಾಗುವುದು ಎಂದು ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಂವಿಧಾನ ಶಿಲ್ಪಿ, ಮಾನವತವಾದಿ ಡಾ.ಬಿ.ಆರ್.ಆಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಮುಂದಿನ ವರ್ಷದಿಂದ ಮಡಿಕೇರಿ ದಸರಾ ಆಚರಣೆಯಂತೆ ಆಚರಿಸಲಾಗುವುದು ಎಂದು ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ತಿಳಿಸಿದೆ.ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಹಿಂದೆ ಆಯಾಯ ಗ್ರಾಮಗಳಲ್ಲಿ ಜಯಂತಿ ಆಚರಿಸಲಾಗುತ್ತಿತ್ತು. ಪಟ್ಟಣದಲ್ಲಿ ದಲಿತಪರ ಸಂಘಟನೆಗಳು ಪ್ರತ್ಯೇಕವಾಗಿ ಆಚರಿಸುತ್ತಿದ್ದೆವು, ಆದರೆ ಪ್ರಸಕ್ತ ವರ್ಷ ತಹಸೀಲ್ದಾರ್ ಕೃಷ್ಣಮೂರ್ತಿ ಅವರು, ದಲಿತ ಸಂಘಟನೆಗಳ ಪದಾಧಿಕಾರಿಗಳನ್ನು ಕರೆಸಿ, ಚರ್ಚೆ ಮಾಡಿ, ತಾಲೂಕು ಆಡಳಿತದ ವತಿಯಿಂದಲೇ ಎಲ್ಲರೂ ಸೇರಿ ಅದ್ದೂರಿ ಜಯಂತಿ ಆಚರಣೆ ಮಾಡುವಂತೆ ಮನವಿ ಮಾಡಿಕೊಂಡ ಮೇರೆಗೆ ಏ.೧೪ರಂದು ಪಟ್ಟಣದಲ್ಲಿ ನಡೆದ ಆರ್ಥಪೂರ್ಣ ಜಯಂತಿ ಕಾರ್ಯಕ್ರಮ ಯಶಸ್ವಿಯಾಯಿತು ಎಂದು ಹೇಳಿದರು.ಗ್ರಾಮೀಣ ಭಾಗಗಳಿಂದ ಒಟ್ಟು ೧೨ ಡಾ.ಅಂಬೇಡ್ಕರ್ ಅವರ ಭಾವಚಿತ್ರವಿರುವ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವಿವಿಧ ಶಾಲೆಗಳ ಮಕ್ಕಳು, ಸಾರ್ವಜನಿಕರು, ತಾಲೂಕು ಆಡಳಿತ ಸಿಬ್ಬಂದಿ, ವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಘನತೆ ಹೆಚ್ಚಿಸಿದರು. ಪೊಲೀಸ್ ಇಲಾಖೆ ಕೂಡ ಮೆರವಣಿಗೆಗೆ ಪೂರಕ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಈ ಕಾರಣದಿಂದ ಎಲ್ಲರಿಗೂ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಸಭೆಗಳನ್ನು ನಡೆಸಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸಲಾಗುವುದು. ಸಂವಿಧಾನದಲ್ಲಿ ನಮಗೆ ಕೊಟ್ಟಿರುವ ಹಕ್ಕುಗಳನ್ನು ಪಡೆದುಕೊಳ್ಳಲು ವಿಚಾರಗೋಷ್ಠಿಗಳನ್ನು ನಡೆಸಲಾಗುವುದು ಎಂದರು.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಆಚರಣಾ ಸಮಿತಿಯವರು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಕೆಲವರು ಮಾಧ್ಯಮದ ಮೂಲಕ ಅಪಪ್ರಚಾರ ಮಾಡಿದರು. ಅವರ ಅರೋಪ ಸುಳ್ಳು. ಯಾವುದೇ ದೇಣಿಗೆ ಸಂಗ್ರಹಿಸಿಲ್ಲ. ಗ್ರಾಮೀಣ ಭಾಗದ ಟ್ಯಾಬ್ಲೊಗಳ ಖರ್ಚನ್ನು ಆಯಾಯ ಗ್ರಾಮದವರೇ ಭರಿಸಿದ್ದಾರೆ. ಎಲ್ಲ ಖರ್ಚುಗಳನ್ನು ತಾಲೂಕು ಆಡಳಿತ ಮಾಡಿದೆ. ವಾದ್ಯ ವೃಂದಕ್ಕೆ ಆಚರಣ ಸಮಿತಿ ಹಣ ನೀಡಿದೆ ಎಂದು ಹೇಳಿದರು.ವರ್ಷವಿಡೀ ಅಂಬೇಡ್ಕರ್ ಜಯಂತಿಯನ್ನು ಯಾರೂ ಬೇಕಾದರೂ ಆಚರಿಸಬಹುದು. ತಾಲೂಕು ಆಡಳಿತದಿಂದ ಆರ್ಥಪೂರ್ಣವಾಗಿ ಆಚರಿಸಿದ ಡಾ.ಅಂಬೇಡ್ಕರ್ ಜಯಂತಿಗೆ ವಿರೋಧ ವ್ಯಕ್ತಪಡಿಸಿದವರು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಿ ನಾವು ಭಾಗವಹಿಸುತ್ತೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಟಿ.ಈ.ಸುರೇಶ್, ಖಜಾಂಚಿ ಬಿ.ಇ. ಜಯೇಂದ್ರ, ಪ್ರಮುಖರಾದ ಜಯಪ್ಪ ಹಾನಗಲ್, ದೃಶ್ಯ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.