ಅಳ್ನಾವರ: ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಯಲ್ಲಿ ಜಾತಿಯ ಅಂಕಿ ಸಂಖ್ಯೆ ನೈಜತೆಯಿಂದ ಕೂಡಿಲ್ಲ, ಇದನ್ನು ಪುನರ ಪರಿಶೀಲನೆ ಮಾಡಿ ಮತ್ತೊಮ್ಮೆ ಗಣತಿ ಕಾರ್ಯ ಕೈಕೊಳ್ಳುವಂತೆ ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಆಗ್ರಹಿಸಿದ್ದಾರೆ.
ಜಾತಿ ಗಣತಿ ಸಮರ್ಪಕವಾಗಿಲ್ಲವೆಂದರೆ ಅದು ಅನೇಕ ಸಮಾಜದ ಘನತೆಗೆ ದಕ್ಕೆಯನ್ನುಂಟು ಮಾಡುತ್ತದೆ. ಗಡಿಬಿಡಿಯಿಂದ ತಯಾರಿಸಿದ ಈ ಜಾತಿಗಣತಿಯು ಕೆಲವೊಂದಿಷ್ಟು ಸಮಾಜಗಳಿಗೆ ಹಿಂಸೆಯನ್ನುಂಟು ಸಹ ಮಾಡಿರುವ ಹಾಗೇ ಭಾಸವಾಗುತ್ತಿದೆ. ಈಗಾಗಲೆ ಪ್ರಕಟ ಮಾಡಿರುವ ಜಾತಿಗಣತಿಯನ್ನು ರಾಜ್ಯದ ಮರಾಠ ಸಮಾಜದ ಪರವಾಗಿ ನಾವು ವಿರೋಧಿಸುತ್ತೇವೆ ಹಾಗಾಗಿ ಸರ್ಕಾರ ಜಾತಿಗಣತಿಯನ್ನು ಸಮಗ್ರವಾಗಿ ಪರಿಶೀಲಿಸಿ ಮತ್ತೊಮ್ಮೆ ಸ್ಪಷ್ಟವಾಗಿ ಗಣತಿ ಕಾರ್ಯ ಕೈಗೊಳ್ಳಬೇಕು ಎಂದರು.
ಸರ್ಕಾರಿ ಅಧಿಕಾರಿಗಳು ಪ್ರತಿ ಮನೆಗಳಿಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆದುಕೊಳ್ಳಬೇಕು, ಅದರ ಜತೆಗೆ ಪ್ರತಿಯೊಂದು ಸಮಾಜದಲ್ಲಿನ ಮುಖಂಡರು ತಮ್ಮ ಸುತ್ತಲಿನ ಜನಾಂಗದವರ ಮಾಹಿತಿ ಸರ್ಕಾರಕ್ಕೆ ಮುಟ್ಟಿಸುವಂತಹ ಕೆಲಸ ಮಾಡಬೇಕು ಎಂದು ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.