ಸಮಾಜದಲ್ಲಿ ಸಮಾನತೆಯ ಹಕ್ಕಿನೊಂದಿಗೆ ರಾಷ್ಟ್ರದ ಏಳಿಗೆಗಾಗಿ ಅಂಬೇಡ್ಕರ್ ನೀಡಿದ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಅಂಬೇಡ್ಕರ್ ಅವರ ಜೀವನಧಾರಿತ ಪುಸ್ತಕ ಓದಬೇಕು.
ಕುಕನೂರು:
ಸದೃಢ ಭಾರತ ನಿರ್ಮಾಣಕ್ಕಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ನೀಡುವ ಮೂಲಕ ಭದ್ರ ಬುನಾದಿ ಹಾಕಿದ್ದಾರೆ ಎಂದು ಮಂಡಲಗಿರಿ ಗ್ರಾಪಂ ಪಿಡಿಒ ಸುರೇಶ ನಾಯಕ ಹೇಳಿದರು.
ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದಿಂದ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆಯ ಹಕ್ಕಿನೊಂದಿಗೆ ರಾಷ್ಟ್ರದ ಏಳಿಗೆಗಾಗಿ ಅಂಬೇಡ್ಕರ್ ನೀಡಿದ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಅಂಬೇಡ್ಕರ್ ಅವರ ಜೀವನಧಾರಿತ ಪುಸ್ತಕ ಓದಬೇಕು ಎಂದರು.
ಗ್ರಾಪಂ ಸದಸ್ಯ ಮಹೇಂದ್ರಕುಮಾರ ಗದಗಿನ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಕನಕಮೂರ್ತಿ ಚಲವಾದಿ ಮಾತನಾಡಿ, ಅಂಬೇಡ್ಕರ್ ಕೊಟ್ಟ ಸಂದೇಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಮುಖಂಡ ಬಾಲರಾಜ ಮಂಗಳೂರು ಮಾತನಾಡಿ, ಅಂಬೇಡ್ಕರ್ ಅವಮಾನ ಅನುಭವಿಸಿ, ಎಲ್ಲರ ಸಮಾನತೆಗಾಗಿ ತಮ್ಮ ಜೀವನವನ್ನು ಅರ್ಪಿಸಿದ ಮಹಾನ್ ವ್ಯಕ್ತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುತ್ತಿಗೆದಾರ ವೀರಪ್ಪ ಬಿಸನಳ್ಳಿ, ಅಂಬೇಡ್ಕರ್ ಬಾಲ್ಯದಲ್ಲಿಯೇ ಜಾತಿ ವ್ಯವಸ್ಥೆ ನೋವು ಅನುಭವಿಸಿ, ಅದನ್ನು ಮೆಟ್ಟಿ ಉನ್ನತ ಶಿಕ್ಷಣ ಪಡೆದರು. ಸಂವಿಧಾನ ರಚನೆಯಲ್ಲಿ ಅನೇಕ ಸುಧಾರಣೆ ತಂದರು. ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ಧ್ಯೇಯದೊಂದಿಗೆ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ‍್ಯಕ್ಕೆ ಬಲ ನೀಡುವ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಎಂದರು.
ಪತ್ರಕರ್ತ ಮಲ್ಲು ಮಾಟರಂಗಿ ಉಪನ್ಯಾಸ ನೀಡಿದರು. ಗ್ರಾಪಂನಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.