ಗಂಗಾವತಿಯಲ್ಲಿ ಅಂಬೇಡ್ಕರ ಪುತ್ಥಳಿಗೆ ಟೊಮೇಟೊ ಸಾಸ್ ಎರಚಿ ಅಪಮಾನ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಕಳೆದ ವರ್ಷ ಕೋರ್ಟ್ ಮುಂಭಾಗದ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಲಾಗಿತ್ತು. ಭಾನುವಾರ ರಾತ್ರಿ ಪುತ್ಥಳಿಗೆ ದುಷ್ಕರ್ಮಿಗಳು ಸಾಸ್ ಎರಚಿರುವುದು ಖಂಡನಾರ್ಹ.

ಗಂಗಾವತಿ: ನಗರದ ನ್ಯಾಯಾಲಯದ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ದುಷ್ಕರ್ಮಿಗಳು ಟೊಮೇಟೋ ಸಾಸ್ ಎರಚಿ ಅಪಮಾನ ಮಾಡಿದ ಬೆನ್ನಲ್ಲೇ ನಗರ ಠಾಣೆಯಲ್ಲಿ ಸೋಮವಾರ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿದ ವಿಷಯ ಹಬ್ಬುತ್ತಿದ್ದಂತೆ ದಲಿತಪರ ಸಂಘಟನೆಯ ಪದಾಧಿಕಾರಿಗಳು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಡಿ.ಸಾಗರ ಬಣ) ಜಿಲ್ಲಾ ಸಂಚಾಲಕ ಕುಂಟೋಜಿ ಮರಿಯಪ್ಪ, ಕಳೆದ ವರ್ಷ ಕೋರ್ಟ್ ಮುಂಭಾಗದ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಲಾಗಿತ್ತು. ಭಾನುವಾರ ರಾತ್ರಿ ಪುತ್ಥಳಿಗೆ ದುಷ್ಕರ್ಮಿಗಳು ಸಾಸ್ ಎರಚಿರುವುದು ಖಂಡನಾರ್ಹ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಪಟ್ಟುಹಿಡಿದರು. ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ವೃತ್ತದಲ್ಲಿ ಉದ್ವಿಗ್ನತೆಯ ವಾತಾವರಣ ಕಂಡುಬಂದಿತು. ಈ ವೇಳೆ ವೃತ್ತದ ಮೂರು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಸ್ಥಳಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಭೇಟಿ ನೀಡಿ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಅಂಬೇಡ್ಕರ್ ಪುತ್ಥಳಿಯನ್ನು ಸ್ವಚ್ಛಗೊಳಿಸಿ ಗೌರವಿಸಬೇಕೆಂದು ಸೂಚನೆ ನೀಡಿದರು.ಪ್ರತಿಭಟನೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ವೀರಭದ್ರಪ್ಪ ನಾಯಕ, ದೊಡ್ಡ ಭೋಜಪ್ಪ, ನ್ಯಾಯವಾದಿ ಹುಸೇನಪ್ಪ ಹಿಂಚಿನಾಳ, ನಗರಸಭಾ ಸದಸ್ಯ ಎಫ್.ರಾಘವೇಂದ್ರ, ಪೂಜಾರಿ ಬಸವರಾಜ್, ಅಂಬಣ್ಣ, ಮಾಗಿ ಹುಲಗಪ್ಪ, ಕನಕಗಿರಿ ತಿಮ್ಮಣ್ಣ, ಡಿ.ಹನುಮಂತಪ್ಪ, ಮಾಸ್ತರ ಹುಲಗಪ್ಪ, ದೇವರ ಮನಿ ಹುಲಿಗೇಶ, ಆರತಿ ವಿರೇಶ, ಹಂಪೇಶ ಹರಿಗೋಲ್, ಮರಿಸ್ವಾಮಿ, ಸೈಯದ್ ಅಲಿ, ಜೋಗದ ಹನುಮಂತಪ್ಪ ನಾಯಕ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.ಸ್ಥಳಕ್ಕೆ ತಹಸೀಲ್ದಾರ ಯು.ನಾಗರಾಜ್, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಪಿಐ ಪ್ರಕಾಶ ಮಾಳೆ ಭೇಟಿ ನೀಡಿದರು.

Share this article