ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹು-ಧಾ ಮಹಾನಗರ ಪಾಲಿಕೆಯಲ್ಲಿ ಮಹಾಪೌರರಿಂದ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ತಮಗೆ ಬೇಕಾದ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡಿದರೆ, ಕಾಂಗ್ರೆಸ್ಸಿನ, ಪಕ್ಷೇತರ ಸದಸ್ಯರ ವಾರ್ಡ್‌ಗಳಿಗೆ ನಯಾಪೈಸಾ ಅನುದಾನ ನೀಡುತ್ತಿಲ್ಲ ಎಂದು ಸಚಿವರ ಎದುರೇ ಪಾಲಿಕೆಯ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಭವನದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಹು-ಧಾ ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತಾರತಮ್ಯ ವಿಷಯದ ಗಂಭೀರ ಚರ್ಚೆ ನಡೆಯಿತು.
15ನೇ ಹಣಕಾಸು ಅನುದಾನದ ಅಡಿ ಮಂಜೂರಾಗಿರುವ ₹40 ಕೋಟಿಗಳಲ್ಲಿ ಪಾಲಿಕೆ ಮಹಾಪೌರರು ತಮಗೆ ಬೇಕಾದವರಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಿದ್ದಾರೆ. ಕಾಂಗ್ರೆಸ್ ಸದಸ್ಯರಿಗೆ ಕಡಿಮೆ ಅನುದಾನ ಮತ್ತು 6 ಜನ ಪಕ್ಷೇತರ ಸದಸ್ಯರಿಗೆ ನಯಾಪೈಸಾ ಹಣ ನೀಡಿಲ್ಲ. ಹೀಗಾದರೆ ಹೇಗೆ ಎಂದು ಪಾಲಿಕೆ ಸದಸ್ಯರಾದ ನಜೀರ್ ಅಹ್ಮದ ಹೊನ್ಯಾಳ, ಆರೀಫ್ ಭದ್ರಾಪುರ, ಚೇತನ ಹಿರೇಕೆರೂರ್, ಸೇರಿದಂತೆ ಹಲವರು ಸದಸ್ಯರು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಯಾವ್ಯಾವ ಸದಸ್ಯರಿಗೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎನ್ನುವ ಮಾಹಿತಿ ನೀಡುವಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚನೆ ನೀಡಿದರು.
ಹೆಚ್ಚುವರಿ ಅನುದಾನ ನೀಡಲಿ: ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಮಾತನಾಡಿ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ನೀತಿ ಸಂಹಿತೆ ಜಾರಿಯಾಗುವುದ ಒಳಗಾಗಿ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಹೀಗಾಗಿ 15ನೇ ಹಣಕಾಸು ಯೋಜನೆ ಅನುದಾನ ಹೊರತುಪಡಿಸಿ ಪಾಲಿಕೆಯ ಸಾಮಾನ್ಯ ನಿಧಿಯಿಂದ ಹೆಚ್ಚುವರಿ ಅನುದಾನ ನೀಡಬೇಕು ಎಂದು ಆಯುಕ್ತರಲ್ಲಿ ಮನವಿ ಮಾಡಿದರು.
ಲೀಸ್ ಪ್ರಾಪರ್ಟಿ: ಪಾಲಿಕೆ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಪಾಲಿಕೆಗೆ ಸೇರಿದ 2700 ಲೀಸ್ ಪ್ರಾಪರ್ಟಿ ವಿಚಾರ ಸರ್ಕಾರದ ಹಂತದಲ್ಲಿದೆ. ಅವುಗಳ ಬಗ್ಗೆ ಆದಷ್ಟು ಬೇಗ ಇತ್ಯರ್ಥವಾಗಲಿ. ಕಳೆದ 60-70 ವರ್ಷಗಳಿಂದ ಅತ್ಯಂತ ಕಡಿಮೆ ಬಾಡಿಗೆ ಪಾವತಿಯಾಗುತ್ತಿದೆ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಹೊಡೆತ ಬೀಳುತ್ತಿದೆ. ಆದಾಯಕ್ಕಿಂತ ಅವುಗಳ ನಿರ್ವಹಣಾ ವೆಚ್ಚವೇ ಹೆಚ್ಚಾಗುತ್ತಿದೆ. ಹೀಗಾಗಿ, ಅವುಗಳ ಬಗ್ಗೆ ತಕ್ಷಣ ಕಾರ್ಯ ಯೋಜನೆ ರೂಪಿಸಿ, ಪಾಲಿಕೆಯ ಸುಪರ್ಧಿಗೆ ನೀಡಲಿ ಎಂದರು.
ಕೆರೆಗಳ ಅಭಿವೃದ್ಧಿ: ನಗರ ವ್ಯಾಪ್ತಿಯಲ್ಲಿನ ಮೂರು ಬೃಹತ್ ಕೆರೆಗಳು ಅಭಿವೃದ್ಧಿ ಕಾಣದೇ ಕಳೆಗುಂದಿವೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ನಿಷ್ಕಾಳಜಿ ವಹಿಸಿರುವುದರಿಂದ ಇಂದು ಸಂಪೂರ್ಣ ಹಾಳಾಗಿ ಹೋಗಿವೆ ಎಂದು ಪಾಲಿಕೆ ಸದಸ್ಯ ವೀರಣ್ಣ ಸವಡಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಪ್ರಾಧಿಕಾರದ ಜತೆಗೆ ಆಯುಕ್ತರು, ಮೇಯರ್ ಮಾತನಾಡಬಹುದಲ್ಲ ಎಂದು ಉತ್ತರಿಸದರು.
ಅಬ್ಬಯ್ಯ ಉತ್ತರಕ್ಕೆ ತಿರುಗೇಟು ನೀಡಿದ ಸವಡಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಅಧೀನದಲ್ಲಿದೆ. ಉನ್ನತ ಮಟ್ಟದಲ್ಲಿ ನೀವೇ ಬಗೆಹರಿಸಬೇಕು ಎಂದರು. ತಕ್ಷಣ ಮಧ್ಯ ಪ್ರವೇಶಿಸಿದ ಸಚಿವ ಸಂತೋಷ ಲಾಡ್, ವ್ಯವಸ್ಥೆಯ ಸರಳೀಕರಣ ದೃಷ್ಟಿಯಿಂದ ಈ ಬಗ್ಗೆ ತಕ್ಷಣ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಸ್ಮಾರ್ಟ್ ಸಿಟಿ ಸಮಸ್ಯೆ: ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಕ್ಕೆ ₹1000 ಕೋಟಿ ಮಂಜೂರಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡರೆ, ಇನ್ನೂ ಕೆಲವು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಆದರೆ, ಪೂರ್ಣಗೊಂಡ ಯೋಜನೆಗಳನ್ನು ಪಾಲಿಕೆ ತನ್ನ ಸುಪರ್ದಿಗೆ ತಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ.
ಏಕೆ ಎಂಬುದರ ಕುರಿತು ಆಯುಕ್ತರು ಸ್ಪಷ್ಟನೆ ನೀಡಬೇಕು. ನಿರ್ವಹಣೆ ಇಲ್ಲದಿದ್ದರೆ ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಮಗಾರಿಗಳು ಹಾಳಾಗುತ್ತದೆ ಎಂದರು. ಈ ವೇಳೆ ಪಾಲಿಕೆಯ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
ಮುಖ ನೋಡಿ ಅನುದಾನ ನೀಡಬೇಡಿ: ಪಾಲಿಕೆಯ ವಿಪಕ್ಷ ನಾಯಕಿ ಸುವರ್ಣಾ ಕಲಕುಂಟ್ಲಾ ಮಾತನಾಡಿ, 13ನೇ ಹಣಕಾಸು ಯೋಜನೆಯಿಂದ 15ನೇ ಹಣಕಾಸು ಯೋಜನೆಯ ವರೆಗಿನ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ಕಾರಣ ಹು-ಧಾ ಮಹಾನಗರ ಪಾಲಿಕೆ ಪರಫಾರ್ಮೆನ್ಸ್ ಗ್ರ್ಯಾಂಟ್‌ನಿಂದ ವಂಚಿತವಾಗಿದೆ.
ಹೀಗಾಗಿ ಪಕ್ಷ ಭೇದ ಮರೆತು ಪಾಲಿಕೆಯ ಎಲ್ಲ ಸದಸ್ಯರಿಗೂ ಸಮಾನ ಅನುದಾನ ಹಂಚಿಕೆ ಮಾಡಿದಾಗ ಮಾತ್ರ ನಗರ ಸುಧಾರಿಸಲು ಸಾಧ್ಯ. ಪಕ್ಷ, ಮುಖ ನೋಡಿ ಅನುದಾನ ನೀಡುವುದರಿಂದ ಸಾರ್ವಜನಿಕರು ಸೌಲಭ್ಯ ವಂಚಿತರಾಗುತ್ತಾರೆ ಎಂದು ಸಲಹೆ ನೀಡಿದರು.
ಸರ್ಕಾರಿ ಹಂತದ ವಿಷಯ: ಹು-ಧಾ ಮಹಾನಗರದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಪಾಲಿಕೆಯ ಸದಸ್ಯರು, ಮೇಯರ್, ಆಯುಕ್ತರು ಸೇರಿ ಬಗೆಹರಿಸಿಕೊಳ್ಳಬಹುದು. ಈ ಸಭೆಯಲ್ಲಿ ವಿಶೇಷವಾಗಿ ಎರಡೂ ಪಕ್ಷಗಳ ಶಾಸಕರು ಭಾಗಿಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ನೇತೃತ್ವ ವಹಿಸಿದ್ದಾರೆ. ಹೀಗಾಗಿ ಸರ್ಕಾರದ ಮಟ್ಟದಿಂದ ಪಾಲಿಕೆಗೆ ಬರಬೇಕಾದ ಅನುದಾನ, ಬಿಲ್ ಬಾಕಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಚರ್ಚಿಸಿ ಸಭೆಯನ್ನು ಅರ್ಥಪೂರ್ಣವಾಗಸೋಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಮನವಿ ಮಾಡಿದರು.
ಅನುದಾನ ಹಂಚಿಕೆಗೆ ಪ್ರತ್ಯೇಕ ಸಮಿತಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಪಾಲಿಕೆ ಸದಸ್ಯರ ಅಹವಾಲುಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಹು-ಧಾ ಪಾಲಿಕೆಯಲ್ಲಿ ಅನುದಾನ ತಾರತಮ್ಯ ಕುರಿತು ಹಲವು ಸದಸ್ಯರಿಂದ ಅಸಮಾಧಾನವಿರುವುದು ಗಮನಕ್ಕೆ ಬಂದಿದೆ.
ಹೀಗಾಗಿ, ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅನುದಾನ ಹಂಚಿಕೆಗಾಗಿಯೇ ಪ್ರತ್ಯೇಕ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಪಾಲಿಕೆಯ ಎಲ್ಲ ಸದಸ್ಯರಿಗೂ ಸಮನಾದ ಅನುದಾನ ಸಿಗಲಿದೆ. ಅನುದಾನ ಹಂಚಿಕೆ ತಾರತಮ್ಯ ವಿಚಾರದಲ್ಲಿ ಶಾಸಕರೂ ಹೊರತಾಗಿಲ್ಲ. ಆದರೆ, ಪಾಲಿಕೆಯ ಮಟ್ಟಿಗೆ ಇದು ದೊಡ್ಡ ಸಮಸ್ಯೆ ಎಂದರು.
ಸಚಿವರಿಂದ ಕಿವಿಮಾತು: ಹು-ಧಾ ಮಹಾನಗರದಲ್ಲಿ ಅವಶ್ಯವಿರುವ ಸುಮಾರು 87 ಸಾವಿರ ಎಲ್‌ಇಡಿ ದೀಪಗಳ ಬಗ್ಗೆ ಸಂಬಧಪಟ್ಟ ಇಲಾಖೆಯ ಜತೆಗೆ ಮಾತನಾಡಿ, ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭವಾಗುವಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ಪಕ್ಷ ಯಾವುದೇ ಇದ್ದರೂ ಸ್ನೇಹ ಶಾಶ್ವತ ಎಂಬುದನ್ನು ಎಲ್ಲರೂ ಅರಿತುಕೊಳ್ಳಿ. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ, ಮಾನವೀಯ ಮೌಲ್ಯ, ಸ್ನೇಹ ಸದಾಕಾಲ ಇರುತ್ತದೆ ಎಂದು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದವರಿಗೆ ಲಾಡ್ ಕಿವಿಮಾತು ಹೇಳಿದರು.