ಕನ್ನಡಪ್ರಭ ವಾರ್ತೆ ಖಾನಾಪುರ
ಗಡಿಭಾಗದಲ್ಲಿ ಕನ್ನಡದ ಕಾಯಕ ಕೈಗೊಂಡಿರುವವರನ್ನು ಗೌರವಿಸುವ ಕಾರ್ಯಗಳು ನಡೆಯಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಮೃತ್ಯುಂಜಯ ಹಿರೇಮಠ ಹೇಳಿದರು.ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ 9ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾನಾಪುರ ತಾಲೂಕು ಸಾಹಿತ್ಯ, ಸಂಗೀತ, ಭಾಷೆ, ಸ್ವಾತಂತ್ರ ಹೋರಾಟ, ಕಲೆ, ಸಂಸ್ಕೃತಿ ಮತ್ತಿತರ ಎಲ್ಲ ಆಯಾಮಗಳಲ್ಲೂ ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿಯ ಐತಿಹಾಸಿಕ ಸ್ಮಾರಕಗಳು, ಪ್ರಾಕೃತಿಕ ತಾಣಗಳನ್ನು ರಕ್ಷಿಸುವ ಕೆಲಸ ನಡೆಯಬೇಕು ಎಂದು ಮನವಿ ಮಾಡಿದರು.
ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಖಾನಾಪುರ ತಾಲೂಕಿನಲ್ಲಿ ಎಲ್ಲ ಭಾಷಿಕರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ಭಾಷಿಕರ ನಡುವೆ ವ್ಯಾಪಾರ-ವಹಿವಾಟು-ವ್ಯವಹಾರ-ವೈವಾಹಿಕ ಸಂಬಂಧಗಳು ಮತ್ತು ಬಾಂಧವ್ಯ ಮಧುರವಾಗಿದೆ. ತಮ್ಮ ವೈಯುಕ್ತಿಕ ಪ್ರತಿಷ್ಠೆ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಕೆಲವರು ಇಲ್ಲಿಯ ಜನರಲ್ಲಿ ಭಾಷಾ ವೈಷಮ್ಯವನ್ನು ಮೂಡಿಸುತ್ತಿದ್ದಾರೆ. ಇದನ್ನು ಎಲ್ಲರೂ ಸೇರಿ ಖಂಡಿಸಬೇಕು ಎಂದು ಸಲಹೆ ನೀಡಿದರು.ಮಲಪ್ರಭಾ ಶುಗರ್ಸ್ ನಿರ್ದೇಶಕ ನಾಸೀರ ಬಾಗವಾನ ಉದ್ಘಾಟಿಸಿ ಮಾತನಾಡಿ, ಮಳೆಗಾಲದಲ್ಲಿ ಭೋರ್ಗರೆಯುವ ಮಲಪ್ರಭಾ, ಮಹದಾಯಿ, ಪಾಂಡರಿ, ಮಾರ್ಕಂಡೇಯ ನದಿಗಳು ಮತ್ತು ನೂರಾರು ಹಳ್ಳಕೊಳ್ಳಗಳು ಬೇಸಿಗೆಯಲ್ಲಿ ಬತ್ತುವ ಕಾರಣ ಇಲ್ಲಿಯವರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ತಾಲೂಕಿನ ಜನಪ್ರತಿನಿಧಿಗಳು ತಾಲೂಕಿನಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರು, ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರು, ಸಾಹಿತಿಗಳು, ಗಣ್ಯರು ಮತ್ತು ಆಹ್ವಾನಿತರನ್ನು ಕಸಾಪ ತಾಲ್ಲೂಕು ಘಟಕದ ವತಿಯಿಂದ ಗೌರವಿಸಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಈಶ್ವರ ಸಂಪಗಾವಿ, ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ, ಸಾಹಿತಿ ಹೇಮಾವತಿ ಸೊನೊಳ್ಳಿ, ಕಸಾಪ ಮಾಜಿ ಅಧ್ಯಕ್ಷರಾದ ವಿ.ವಿ ಬಡಿಗೇರ, ಜಗದೀಶ ಹೊಸಮನಿ, ಜೆಡಿಎಸ್ ಮುಖಂಡರಾದ ರವಿ ಕಾಡಗಿ, ರಾಜು ಖಾತೇದಾರ, ಮೇಘಾ ಕುಂದರಗಿ, ಸ್ವಾಗತ ಸಮಿತಿ ಅಧ್ಯಕ್ಷ ದೇಸಾಯಿ ಗಾಳಿ, ಗಂದಿಗವಾಡ ಗ್ರಾಪಂ ಪಿಡಿಒ ಬಾಲರಾಜ್ ಭಜಂತ್ರಿ, ಕ್ಷೇತ್ರ ಸಮನ್ವಯಾಧಿಕಾರಿ ಅಪ್ಪಣ್ಣ ಅಂಬಗಿ, ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ ಕಿವಡಸಣ್ಣವರ, ಗಡಿನಾಡು ಹಿತರಕ್ಷಣಾ ವೇದಿಕೆಯ ಬಸವರಾಜ ಭಂಗಿ, ಎಂ.ಎಂ.ರಾಜೀಭಾಯಿ, ಕರವೇ ಮುಖಂಡ ವಿಠ್ಠಲ ಹಿಂಡಲಕರ, ಲಿಂಗನಮಠ ಗ್ರಾಪಂ ಅಧ್ಯಕ್ಷ ಕಾಶೀಂ ಹಟ್ಟಿಹೊಳಿ, ಸಾಮಾಜಿಕ ಕಾರ್ಯಕರ್ತ ಶಂಕರ ಸೊನೊಳ್ಳಿ, ಕಸಾಪ ಪದಾಧಿಕಾರಿಗಳಾದ ಪ್ರಸನ್ನ ಕುಲಕರ್ಣಿ, ಅಲ್ತಾಫ್ ಬಸರಿಕಟ್ಟಿ, ಉಮಾ ಅಂಗಡಿ, ರಾಜೇಶ್ವರಿ ಕುಡಚಿ, ಪ್ರಭುದೇವ ಹಿರೇಮಠ, ವೀರಭದ್ರ ಜವಳಿ, ಭರಮಾ ತಳವಾರ, ಶ್ರೀಧರ ಗಣಾಚಾರಿ ಸೇರಿದಂತೆ ಕಸಾಪ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮತ್ತು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.
ಶಿಕ್ಷಕ ಮಂಜುನಾಥ ಶೆಟ್ಟೆನ್ನವರ ಕಾರ್ಯಕ್ರಮ ನಿರ್ವಹಿಸಿದರು. ಬಸವಪ್ರಭು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಲಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ಎಸ್.ಎಚ್ ಬಾಗವಾನ ಸ್ವಾಗತಿಸಿದರು. ಉದಯ ಬಡಸದ ವಂದಿಸಿದರು.ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ:
ಗಂದಿಗವಾಡ ಗ್ರಾಮದಲ್ಲಿ ಜರುಗಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನೆರವೇರಿತು. ಗ್ರಾಮದ ಪರಂಜ್ಯೋತಿ ಪ್ರೌಢಶಾಲೆಯಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಸಮ್ಮೇಳನ ನಡೆಯುವ ಗುರುಸಿದ್ಧೇಶ್ವರ ವೇದಿಕೆ ತಲುಪಿತು. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುವ ಬೀದಿ ಕನ್ನಡ ಧ್ವಜಗಳಿಂದ ಸಿಂಗಾರಗೊಂಡಿತ್ತು. ಮೆರವಣಿಗೆಯನ್ನು ಇಟಗಿಯ ಶಿಕ್ಷಣ ತಜ್ಞ ವಿಜಯ ಸಾಣಿಕೊಪ್ಪ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ವೀರಗಾಸೆ ಮತ್ತು ಕಂಸಾಳೆ ಕಲಾತಂಡಗಳು, ನಂದಿಕೋಲು ಹೊತ್ತ ಕಲಾವಿದರು, ವಿವಿಧ ಮಹನೀಯರ ವೇಷಧಾರಿ ಮಕ್ಕಳು, ಪೂರ್ಣ ಕುಂಭ ಹೊತ್ತ ಮಹಿಳೆಯರು ಸೇರಿದಂತೆ ಗ್ರಾಮದ ವಿವಿಧ ಶಾಲೆ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ಕಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು. ಮೆರವಣಿಗೆಗೂ ಮೊದಲು ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಹಿರಿಯ ನ್ಯಾಯವಾದಿ ದಯಾನಂದ ಹಿಟ್ಟಿನ ರಾಷ್ಟ್ರಧ್ವಜಾರೋಹಣ, ಮಂಗಲಾ ಮೆಟಗುಡ್ ಪರಿಷತ್ ಧ್ವಜಾರೋಹಣ ಮತ್ತು ಬಸವಪ್ರಭು ಹಿರೇಮಠ ನಾಡ ಧ್ವಜಾರೋಹಣ ನೆರವೇರಿಸಿದರು.