ಕನ್ನಡಪ್ರಭ ವಾರ್ತೆ ಕುಂದಾಪುರ
ಪಕ್ಷದ ಹಾಗೂ ಸಂಘಟನೆಯ ಹಿರಿಯ ನಾಯಕರ ಎಷ್ಟೋ ವರ್ಷಗಳ ತಪಸ್ಸು, ಕನಸು ನನಸಾಗುತ್ತಿದೆ. ಅಡ್ವಾಣಿಯವರ ರಾಮರಾಜ್ಯದ ಮತ್ತು ರಾಮ ಮಂದಿರ ನಿರ್ಮಾಣದ ಕನಸು ಮತ್ತು ಶ್ಯಾಮ ಪ್ರಸಾದ ಮುಖರ್ಜಿಯವರ ಆರ್ಟಿಕಲ್ 370 ರದ್ದು ಇದೆಲ್ಲವುದನ್ನು ನೋಡುವ ಸೌಭಾಗ್ಯ ನಮಗೆ ದೊರೆತಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಹಾಗೂ ಅವರ ಕೈ ಬಲಪಡಿಸಲು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.ಬೈಂದೂರು ತಾಲೂಕು ವತಿಯಿಂದ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಸೋಮವಾರ ಜರುಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ ಸಮೃದ್ಧ ಬೈಂದೂರು-ಸಮರ್ಥ ಭಾರತ ಉದ್ಘಾಟಿಸಿ ಅವರು ಮಾತನಾಡಿದರು.ರಾಜಕೀಯ ಕ್ಷೇತ್ರದಲ್ಲಿ ಕಾರ್ಯಕರ್ತರ ನಡೆ-ನುಡಿ, ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕಾರಣ ಉತ್ತಮ ದಿಕ್ಕಿನಲ್ಲಿ ಸಾಗುತ್ತಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ನಾನು ನನ್ನ ಕುಟುಂಬ ತಂದೆ ತಾಯಿಗೆ ಯಾವುದೇ ಹೊರೆಯಾಗದ ರೀತಿಯಲ್ಲಿ ಕುಟುಂಬಕ್ಕೂ ಸಮಯ ನೀಡಿ, ಹೆಚ್ಚಿನ ಸಮಯವನ್ನು 2-3 ತಿಂಗಳು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮೋದಿಜಿಯವರನ್ನು ಹೆಚ್ಚಿನ ಬೆಂಬಲದೊಂದಿಗೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕು ಎಂದರು.ಇಡೀ ದೇಶದ ವಾತಾವರಣ ನೋಡಿದರೆ ಸುಮಾರು 400ಕ್ಕಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ. ಹಿಂದುತ್ವಕ್ಕೆ ಶಕ್ತಿ ತುಂಬಿದ ಅವಿಭಿಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಲಕ್ಷ್ಯ ಆಗಬಾರದು. ಕರ್ನಾಟಕ ರಾಜ್ಯದಲ್ಲಿ ಮೋದಿಜಿಯವರಿಗೆ ಅತ್ಯಂತ ಹೆಚ್ಚಿನ ಮತವನ್ನು ನೀಡಿದ ಮೊದಲನೇ ಕ್ಷೇತ್ರ ಬೈಂದೂರು ಆಗಬೇಕು ಎಂಬುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಾಲತಿ ನಾಯಕ್, ಬೈಂದೂರು ಕ್ಷೇತ್ರ ಉಪಾಧ್ಯಕ್ಷ ಸಾಮ್ರಾಟ್ ಶೆಟ್ಟಿ, ವಿನೋದ ಭಂಡಾರಿ, ಶೇಖರ ಖಾರ್ವಿ, ಶ್ಯಾಮಲಾ ಕುಂದರ್, ಪ್ರೇಮಾ ಸಿ. ಪೂಜಾರಿ, ಭಾಗೀರಥಿ ಸುರೇಶ್, ಗಣೇಶ ಗಾಣಿಗ, ಎಂ.ಆರ್.ಶೆಟ್ಟಿ, ಶೇಖರ ಕುಲಾಲ್, ಮಾಲಿನಿ ಕೆ., ಶ್ಯಾಮಲಾ ನೇರಳಕಟ್ಟೆ, ವಾಸು ಮರಾಠಿ, ಗಣೇಶ ಪೂಜಾರಿ, ಅಶೋಕ ಕುಮಾರ್ ಶೆಟ್ಟಿ, ಅನುರ್ ಮೆಂಡನ್, ಚಂದ್ರ ಜೋಗಿ, ಚಂದ್ರು ಮೊದಲಾದವರು ಉಪಸ್ಥಿತರಿದ್ದರು.ಬಳಿಕ ನಡೆದ ಗೋಷ್ಠಿಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬಿಜೆಪಿ ಬೈಂದೂರು ಸವೆದ ಹಾದಿ ಬಗ್ಗೆ, ಹಿಂದುತ್ವ, ರಾಷ್ಟ್ರೀಯತೆ, ಬಿಜೆಪಿ ಬದ್ಧತೆ ಬಗ್ಗೆ ಪ್ರಾಂತ ಸಹಕಾರ್ಯವಾಹ ಬಿ.ಎಸ್.ಪ್ರಕಾಶ್ ಮತ್ತು ಬೈಂದೂರು ಅಭಿವೃದ್ಧಿ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ವಿಚಾರ ಮಂಡಿಸಿದರು.ತಾಪಂ ಮಾಜಿ ಸದಸ್ಯ ಮಹೇಂದ್ರ ಪೂಜಾರಿ ಸ್ವಾಗತಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಬಿ.ಎಸ್.ಸುರೇಶ ಶೆಟ್ಟಿ ವಂದಿಸಿದರು.